
ಮುಂದಕ್ಕೆ ಕರಪತ್ರ ಹಂಚುವುದು, ಗೋಡೆ ಬರಹ ಇತ್ಯಾದಿಗಳ ಮೂಲಕ ಜನ ಜಾಗೃತಿಗೆ ಮುಂದಾದೆವು. ಆ ಸಂದರ್ಭದಲ್ಲಿ ಭಿತ್ತಿಪತ್ರಗಳ ಬಳಕೆ ಕಡಿಮೆಯಿತ್ತು. ಆದರೆ ನಾನು ಅದನ್ನೂ ಬಳಸಿಕೊಂಡೆ; ಹೇಗಂದ್ರೆ, ಆಗ ಈಗಿನ ಹಾಗೆ ಕ್ಸೆರಾಕ್ಸ್ ಎಲ್ಲ ಇರಲಿಲ್ಲ, ಏನಿದ್ದರೂ ಸೈಕ್ಲೋಸ್ಟೈಲ್ ಅಥವಾ ಕಾರ್ಬನ್ ಇಟ್ಟು ಬರೆಯುವುದು. ಟೈಪ್ ಕ್ಲಾಸಿನಲ್ಲಿ ಉಪಯೋಗಿಸಿ ಬಿಸಾಡಿದ ಕಾರ್ಬನ್ ಪೇಪರನ್ನು ಖಾಲಿ ಪೇಪರಿನ ಅಡಿಯಲ್ಲಿಟ್ಟು ಪ್ರತಿ ತೆಗೆಯುವುದು; ಒಮ್ಮೆಗೆ ೨-೩ ಪ್ರತಿ ತೆಗೆಯುತ್ತಿದ್ದೆ. ಹೀಗೆ ದಿವಸಕ್ಕೆ ಏಳೆಂಟು ಪ್ರತಿಗಳನ್ನು ಮಾಡಿ, ಮನೆ ಪಕ್ಕದ ರೇಶನ್ ಅಂಗಡಿಗೆ ಹೋಗುವಾಗ ಯಾರ ಕಣ್ಣಿಗೂ ಕಾಣದಂತೆ ಅಡಗಿಕೂತು, ಗೋಂಕಿನ ಮರದ ಗೋಂದಿನಲ್ಲಿ(ಗೇರು ಮರದ ಅಂಟು) ಅಲ್ಲಲ್ಲಿ ಅಂಟಿಸುತ್ತಿದ್ದೆ.

ಪ್ರತಿಭಟನಾರ್ಥವಾಗಿ ಉಪಯೋಗಿಸುವ ಯಾವುದೇ ಸಾಮಗ್ರಿಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವುದೂ ಆಗ ಕಷ್ಟವೇ ಆಗಿತ್ತು. ಸಂಶಯ ಇದ್ದವರ ಮೇಲೆ ಪೊಲೀಸರ ಒಂದು ದೃಷ್ಟಿ ಯಾವತ್ತೂ ಇರುತ್ತಿತ್ತು, ಸರಕಾರದ ವಿರುದ್ಧ ಅಲ್ವೆ ನಮ್ಮ ಪ್ರತಿಭಟನೆ? ಸಾಮಗ್ರಿಗಳು ದೊರೆತರೆ ಶಿಸ್ತಿನ ಕ್ರಮ ಖಂಡಿತ. ದುರವಸ್ಥೆ ನೋಡಿ! ಈ ತಳ್ಳಿ ಅರ್ಜಿ ಹಾಕುವವರು ಹೆಚ್ಚು ಅಪಾಯಕಾರಿಗಳು, ಈ ರೀತಿಯ ಸಮಸ್ಯೆಗಳೂ ನನಗಾದದ್ದಿದೆ;


ಒಂದು ಸಲ ನಮ್ಮೂರಿನ ಪಂಚಾಯತ್ ಕಛೇರಿಯ ಗೋಡೆಯ ಮೇಲೆ ಯಾರೋ ನಮಗಾಗದವರು ಅಥವಾ……. ಇನ್ಯಾರೋ ಗೊತ್ತಿಲ್ಲ, ಅಂತು ತುರ್ತು ಪರಿಸ್ಥಿತಿಯ ವಿರುದ್ಧ ಏನೇನೋ ಬರೆದು ಹಾಕಿದ್ದರು, ಅದರ ಕೆಳಗಡೆ ನನ್ನದೇ ಹೆಸರು; ಪೊಲೀಸರು ಸ್ವಲ್ಪ ಮಟ್ಟಿಗೆ ದಬಾಯಿಸಿದರು, ಆದರೆ ನನ್ನ ಗಾತ್ರ ನೋಡಿ ಏನು ಅನಿಸಿತೋ ಗೊತ್ತಿಲ್ಲ, ಆಗ ನಾನು ಸ್ವಲ್ಪ ಎಸ್ಕಿಮೊಗಳಂತಿದ್ದೆ, ಎಚ್ಚರಿಕೆ ಕೊಟ್ಟು ಸಾಗ ಹಾಕಿದರು. ಕಹಳೆ ಪತ್ರಿಕೆಗಳು ಪೊಲೀಸರ ಕೈಗೆ ಸಿಗುತ್ತಲೂ ಇತ್ತು, ಆದರೆ ಎಲ್ಲಿ ಏನು ಎತ್ತ ಅನ್ನುವುದು ಅವರಿಗೂ ಗೊತ್ತಾಗುತ್ತಿರಲಿಲ್ಲ; ದಿನ ಸಾಗುತ್ತಿದೆ………
ಮುಂದುವರಿಯುತ್ತದೆ……..
ರಾಜಮಣಿ ರಾಮಕುಂಜ
Advertisement







