
ಅದಾಗಲೇ ದೇಶಾದ್ಯಂತ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಗಳು ಬೇರೆ ಬೇರೆ ರೂಪದಲ್ಲಿ ಆರಂಭವಾಗಿತ್ತು. ಸಂಬಂಧಿತ ಸರಕಾರಿ ಕಛೇರಿಗಳ ಮುಂಭಾಗದಲ್ಲಿ ಸತ್ಯಾಗ್ರಹ, ಮೆರವಣಿಗೆ, ಸಾರ್ವಜನಿಕ ಭಾಷಣ, ಕರಪತ್ರ ವಿತರಣೆ ಇತ್ಯಾದಿಗಳು ಭರದಿಂದ ಸಾಗುತ್ತಿತ್ತು. ಅಲ್ಲಲ್ಲಿ ಪೊಲೀಸರಿಂದ ಬಂಧನಗಳೂ ನಡೆಯುತ್ತಿದ್ದವು.

ನನಗಾಗ ಭಾಷಣ ಮಾಡುವ ಹುಚ್ಚು, ಮೆರವಣಿಗೆಯಲ್ಲಿ ಹೋಗಬೇಕೆನ್ನುವ ಕೆಚ್ಚು. ರಾಸ್ವ ಸಂಘದ ಕೆಲಮಂದಿ ಕಾರ್ಯಕರ್ತರಲ್ಲಿ ಕೆಲವರು ಈಗಾಗಲೇ ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸುತ್ತಾ ಇದ್ದರು. ನಾನಾಗ ಶಾರ್ಟ್ ಹ್ಯಾಂಡ್ ಹಾಗೂ ಕನ್ನಡ ಟೈಪ್ ರೈಟಿಂಗ್ ಸ್ಕೂಲಿಗೂ ಹೋಗುತ್ತಿದ್ದೆ, ಬೆಳಗ್ಗೆ ಹತ್ತು ಘಂಟೆಗೆ ತರಗತಿ ಆರಂಭವಾದರೆ ಹನ್ನೊಂದು ಗಂಟೆಗೆಲ್ಲ ಮುಗಿಯುತ್ತಿತ್ತು. ಮನೆ ದೇವರಿಗೆ ಹಾಗೂ ಇತರ ಒಂದೆರಡು ಮನೆಗಳಲ್ಲಿ ಪೂಜೆಯನ್ನು ಪೂರೈಸಿ ಮನೆಯಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಉಪ್ಪಿನಂಗಡಿಗೆ ನಡೆದುಕೊಂಡು ಹೋಗಬೇಕಾಗಿತ್ತು. ಬಸ್ಸಿನಲ್ಲಿ ಹೋಗುವಷ್ಟು ಅಂದು ಪರಿಸ್ಥಿತಿ ಚೆನ್ನಾಗಿರಲಿಲ್ಲ. ದಿನನಿತ್ಯ ನನ್ನ ಪಾದ ಯಾತ್ರೆಯನ್ನು ಅರಿತುಕೊಂಡಿದ್ದ ಕೆಲಮಂದಿ ಪರಿಚಯವಿದ್ದ ಬಾಡಿಗೆ ಕಾರಿನವರು ಕೆಲವೊಂದು ಸಲ ನನ್ನನ್ನು ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು, ನನಗಾದರೋ ಸ್ವಾಭಿಮಾನದ ಪ್ರಶ್ನೆ. ನಮ್ಮ ತಾಯಿ ಯಾವತ್ತೂ ಸ್ವಾಭಿಮಾನವನ್ನು ಬಲಿಗೊಟ್ಟು ಬದುಕಿದವರಲ್ಲ, ಅದರ ಪ್ರಭಾವವಿರಬಹುದು, ಕಾರುಗಳ ಸದ್ದು ಕೇಳಿದ ತಕ್ಷಣ ಮರಗಳ ಎಡೆಯಲ್ಲಿ ಮರೆಯಾಗುತ್ತಿದ್ದೆ. ಆದರೂ ಪಾಪ ಕೆಲವೊಂದು ಸಲ ಅಮ್ಮ ಬಸ್ಸಿಗೆ ಅಂತ ಹಣ ಕೊಡುತ್ತಿದ್ದರು; ಅವರಾದರೂ ಎಲ್ಲಿಂದ ತರಬೇಕು?ತಾಯಿ ಕರುಳು ಅಲ್ವೆ? ನಮ್ಮ ತಂದೆಯವರ ತಮ್ಮ ಆವಾಗ ದುರ್ಗಾಪುರದಲ್ಲಿದ್ದರು; ಮಾತೃ ಹೃದಯದ ಚಿಕ್ಕಪ್ಪ ಮಾಡುತ್ತಿದ್ದ ಮನಿ ಆರ್ಡರ್ ನಮಗಾಗ ಜೀವ ಸಂಜೀವಿನಿ. ಸೂಕ್ಷ್ಮ ಮತಿಗಳಾದ ನಮ್ಮ ಅಮ್ಮ ಅಲ್ಪ ಅ್ವಲ್ಪ ಸಿಗುತ್ತಿದ್ದ ಅಡಕೆ, ತೆಂಗಿನ ಕಾಯಿ ಇತ್ಯಾದಿಗಳಿಂದ ಬದುಕನ್ನು ಸರಿದೂಗಿಸುತ್ತಿದ್ದರು. ನಿಜ ಹೇಳ ಬೇಕೆಂದರೆ, ಅಮ್ಮ ಕೊಡುತ್ತಿದ್ದ ಹಣವನ್ನು ನಾನೇ ನಿರಾಕರಿಸುತ್ತಿದ್ದುದೂ ಉಂಟು, ನಡೆದು ಹೋಗುವುದು ನನಗೇನು ಅಷ್ಟೊಂದು ದೊಡ್ಡ ಸಂಗತಿಯಾಗಿರಲಿಲ್ಲ. ಅದು ನನಗೆ ನಮ್ಮ ತಂದೆಯವರಿಂದ ಬಂದ ಬಳುವಳಿ.ಆಶ್ಚರ್ಯವಾದರೂ ಸತ್ಯ, ನಾನು ಅವರು ವಾಹನಗಳಲ್ಲಿ ಹೋದದ್ದನ್ನು ಕಂಡದ್ದೇ ಬಹಳ ಅಪೂರ್ವ; ಅವರು ಕಾಶಿ, ಬದರಿಗೂ ಕಾಲ್ನಡಿಗೆಯಲ್ಲೇ ಹೋಗಿದ್ದರೆಂಬುದಾಗಿ ಅವರ ತಲೆಮಾರಿನವರು ಹೇಳುವುದನ್ನು ಕೇಳಿದ್ದೇನೆ. ಇರಲಿ ಬಿಡಿ, ಅದು ಖಾಸಗಿ ವಿಚಾರ.


ಮುಂದಕ್ಕೆ ನಾನೂ ಕೂಡ ಪೂರ್ಣ ಮನಸ್ಸಿನಿಂದ ಪ್ರತಿಭಟನೆಗಳಲ್ಲಿ ಭಾಗವಹಿಸುವ ದೃಢ ಸಂಕಲ್ಪವನ್ನು ಮಾಡಿದೆ, ಇದಕ್ಕೆ ಸರಿಯಾಗಿ ತಾಯಿಯ ಸೇವೆಗೆ ತಾಯಿ ಒಪ್ಪಿಗೆಯೂ ದೊರೆಯಿತು; ದಿನಚರಿಗಳನ್ನು ಬದಲಿಸಿಕೊಂಡೆ, ಹೇಗೋ ಏನೋ ಹೋಗುವಾಗ ನಡಿಗೆ ಬರುವಾಗ ಬಸ್ಸನ್ನು ರೂಢಿಸಿಕೊಂಡೆ. ಬೆಳಗಿನ ಜಾವ ನಾಲ್ಕು ಗಂಟೆಗೇನೇ ಎದ್ದು, ಮನೆ ದೇವರಿಗೆ ಪೂಜೆ ಸಲ್ಲಿಸಿ ಇತರ ಮನೆಗಳಲ್ಲಿ ನಿರ್ದಿಷ್ಟವಲ್ಲದಿದ್ದರೂ ನಿಗದಿತ ಮನೆಗಳ ಕದವನ್ನು ಆರು ಗಂಟೆಗೇನೇ ತಟ್ಟಿ ಪೂಜೆಗೈದು, ಉಪ್ಪಿನಂಗಡಿಗೆ ಪಯಣಿಸಿ ತರಗತಿ ಮುಗಿಸಿ ಮನೆಗೆ ಬಂದು ಅಥವಾ ಅಲ್ಲಿಂದಲೇ ಕಾರ್ಯ ಕ್ಷೇತ್ರಕ್ಕೆ ಧುಮುಕುವುದು. ದೈನಂದಿನ ವರ್ತಮಾನಗಳ ಮೇಲೆ ನನ್ನ ಹಾಗೂ ನಮ್ಮ ಕಾರ್ಯಕ್ರಮಗಳ ರೂಪಗಳಲ್ಲೂ ಬದಲಾಗುತ್ತಿತ್ತು. ನನಗಿದು ಪ್ರತಿಭಟನೆಗಳ ಆರಂಭದ ದಿನಗಳಷ್ಟೇ.
ಮುಂದುವರಿಯುತ್ತದೆ…….
ರಾಜಮಣಿ ರಾಮಕುಂಜ.
Advertisement







