
ಬಂಟ್ವಾಳ: ಜಾತಿ, ಧರ್ಮದ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗದ, ಎಲ್ಲಾ ಸಮುದಾಯದ ಜನರಿಗೂ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ಎರಡೂವರೆ ವರುಷದಿಂದ ದಾನಿಗಳ ಸಹಕಾರದೊಂದಿಗೆ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ವಿತರಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು
ತುಂಬೆ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಸಾಲ್ಯಾನ್
ಹೇಳಿದರು.
ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿ ಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಹಾಗೂ ದವಸಧಾನ್ಯದ ಕಿಟ್ ವಿತರಿಸಿ ಮಾತನಾಡಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿ ಕ್ಷಯ ರೋಗಿಗಳು ಪ್ರತಿತಿಂಗಳು ಇಮೋಗ್ಲೋಬಿನ್, ರಕ್ತದೊತ್ತಡ, ಶುಗರ್ ತೂಕ ಪರೀಕ್ಷೆ ಮಾಡಿಕೊಳ್ಳಬೇಕು, ಆಹಾರ ಪದ್ದತಿಯನ್ನು ಯುಕ್ತವಾಗಿ ಪಾಲಿಸಿಕೊಂಡು ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದರು.
ಕುಮ್ಡೇಲು ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಮೋಕ್ತೇಸರ ಕೆ.ಭಾಸ್ಕರ ಚೌಟ, ನಾರಾಯಣ ಬಡ್ಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸೇವಾಂಜಲಿಯ ಟ್ರಸ್ಟಿ ಕೊಡ್ಮಾನ್ ದೇವದಾಸ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮಾ ಚಂದ್ರಶೇಖರ್ ವಂದಿಸಿದರು.
Advertisement







