

ಮಂಗಳೂರು: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಓಬಿಸಿ ಮೋರ್ಚಾ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಸ್ವದೇಶಿ ಉತ್ಪನ್ನಗಳ ಮೇಳಾ ಕೋಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ನಡೆಯಿತು.
ಸ್ವದೇಶಿ ಉತ್ಪನ್ನಗಳಿಗೆ ಮನ್ನಣೆ, ವೋಕಲ್ ಫಾರ್ ಲೋಕಲ್
ಪರಿಕಲ್ಪನೆಯಡಿ ನಡೆದ ಈ ಕಾರ್ಯಕ್ರಮವನ್ನು ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಳ್ಳಿಮಾರ್ ಉದ್ಘಾಟಿಸಿದರು.ಅವರು ಮಾತನಾಡಿ ಭಾರತ ಪುಣ್ಯಭೂಮಿ. ಇಲ್ಲಿ ಜನಿಸಿದ ನಾವು ಪುಣ್ಯವಂತರು. ಜಗತ್ತಿನಲ್ಲಿ ಇಂತಹ ದೇಶ ಎಲ್ಲೂ ಇರದು. ಇಂದು ಜನ್ಮಭೂಮಿಯನ್ನು ನೆನೆಪಿಸುವ ಸ್ವದೇಶಿ ಮೇಳ ಕಾರ್ಯದಲ್ಲಿ ನಾವು ಭಾಗವಹಿಸಿರುವುದು ಪುಣ್ಯ ಜಗತ್ತಿನಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರ ಎನ್ನುವುದನ್ನು ಜಗತ್ತಿಗೆ ಪ್ರಧಾನಿ ಮೋದಿ ತಿಳಿಸಿ ಕೊಟ್ಟಿದ್ದಾರೆ ಎಂದರು.


ಬಿಜೆಪಿ ಮಂಗಳೂರು ವಿಧಾನಸಭಾಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಧೀಮಂತ ನಾಯಕ ನರೇಂದ್ರ ಮೋದಿಯವರು. ಅವರ 76 ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗಿದ್ದು ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು. ಭಾರತವನ್ನು ವಿಶ್ವಕ್ಕೆ ದೊಡ್ಡಣ್ಣನಾಗುವ ಅವಕಾಶವನ್ನು ಮೋದಿ ಒದಗಿಸಿ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ ಮಾತನಾಡಿ ಮಂಗಳೂರು ಮಂಡಲ ಒಬಿಸಿ ಮೋರ್ಚಾದ ವತಿಯಿಂದ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳು ಜನರಿಗೆ ತಲುಪಬೇಕಿದೆ ಎಂದರು.

ಬಿಜೆಪಿ ಮಂಗಳೂರು ಮಂಡಲದ ಉಪಾದ್ಯಕ್ಷೆ ಪೂಜಾ ಪೈ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆರ್ ಸಿ ಎಂ ಸ್ವದೇಶಿ ವಸ್ತುಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ವಂದೇ ಮಾತರಂ ಪುಸ್ತಕ ಬಿಡುಗಡೆ ಮಾಡಲಾಯಿತು. ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯ ಡಾ. ಸುಬ್ರಹ್ಮಣ್ಯ, ಕೆ ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಅನಂತ್ ವಿವಿಧ ಕ್ಷೇತ್ರಗಳ ಸಾಧಕರಾದ ಪ್ರದೀಪ್ ಬಗಂಬಿಲ, ಶಂಕರ ನಾರಾಯಣ ಆಚಾರ್ಯ ಕೋಟೆಕಾರ್, ಗಂಗಾ ಆನಂದ್, ಧನ್ಯಶ್ರೀ , ತೃಪ್ತಿ ಉಚ್ಚಿಲ್, ಗಗನ್ ಪೂಜಾರಿ, ಸಾನಿಧ್ಯ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಮಂಗಳೂರು ಮಂಡಲ ಓಬಿಸಿ ಮೋರ್ಚಾದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಮಂಡಲ ಪ್ರಭಾರಿ ವಸಂತ ಹೊಸಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ್ ಸಾಲ್ಯಾನ್ ನರಿಕೊಂಬು, ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ
ಶೇಖರ್ ಕಣ್ಣೀರ್ ತೋಟ ಸ್ವಾಗತಿಸಿದರು. ಸುಮಲತ ಕೋಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಣೇಶ್ ಕಾಪಿಕಾಡು ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ವದೇಶಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಎಸ್ ಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಂ ಭಟ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಹಾರ ಮೇಳ, ಸರ್ಕಾರದ ಯೋಜನೆಗಳ ಮಾಹಿತಿ, ಅಂಗಾಂಗ ದಾನ ಜಾಗೃತಿ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ ಅಭಿಯಾನ ಮತ್ತಿತರ ಕಾರ್ಯಕ್ರಮಗಳು ನಡೆಯಿತು.
Advertisement







