
ಬಂಟ್ವಾಳ: ಜಗತ್ತಿಗೆ ಮಾನವತೆಯ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕೇರಳದ ಶಿವಗಿರಿ ಮಠಕ್ಕೆ ಬಂಟ್ವಾಳದ ಭಕ್ತಾದಿಗಳ ತಂಡ ತೀರ್ಥ ಯಾತ್ರೆ ಕೈಗೊಂಡಿತು.
ಸಜೀಪಮೂಡ ಸುಭಾಷ್ ನಗರದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ವತಿಯಿಂದ ನಡೆದ 11ನೇ ವರ್ಷದ ತೀರ್ಥಯಾತ್ರೆಯಲ್ಲಿ ಬಂಟ್ವಾಳದ ಗುರುಗಳ ಭಕ್ತವೃಂದ ಕ್ಷೇತ್ರ ಸಂದರ್ಶನ ಮಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚರಿತ್ರೆಯ ಬಗ್ಗೆ ತಿಳಿದು ಕೊಂಡರು.


ಕೇರಳ ಶಿವಗಿರಿಯ ಹಿರಿಯ ಸ್ವಾಮೀಜಿಗಳಲ್ಲಿ ಓರ್ವರಾದ ಸ್ವಾಮೀ ಸತ್ಯಾನಂದ ತೀರ್ಥರ ಮಾರ್ಗದರ್ಶನದಲ್ಲಿ ಶಿವಗಿರಿ ಮಠದ ಶ್ರೀಶಾರದಾ ಪೀಠ, ವೈದಿಕ ಮಂಟಪ, ರಿಕ್ಷಾ ಮಂಟಪ, ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾಸಮಾಧಿ, ಚೆಂಬಳಂತಿಯಲ್ಲಿರುವ ನಾರಾಯಣ ಗುರುಗಳು ಹುಟ್ಟಿದ ಮನೆ, ಮಣಕ್ಕಲ್ ಭದ್ರಕಾಳಿ ದೇವಸ್ಥಾನ, ಅರಿವಿಪುರಂನಲ್ಲಿ ನಾರಾಯಣ ಗುರುಗಳು ಸ್ಥಾಪಿಸಿದ ಶಿವ ದೇವಾಲಯ ಮತ್ತಿತರ ಸ್ಥಳಗಳನ್ನು ಸಂದರ್ಶಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ತಂದ ನಯ್ಯಾರ್ ನದಿ ವಿಶೇಷತೆ, ನಾರಾಯಣ ಗುರುಗಳ ಶಿಷ್ಯ ಪರಂಪರೆ, ಜೀವಿತಾವಧಿಯಲ್ಲಿ ತೋರಿದ ಪವಾಡಗಳ ಬಗ್ಗೆ ಸ್ವಾಮೀ ಸತ್ಯಾನಂದ ತೀರ್ಥರು ತಿಳಿಸಿಕೊಟ್ಟರು.

ಬ್ರಹ್ಮಶ್ರೀ ನಾರಾಯಣ ಗುರುಗಳು 6 ವರ್ಷಗಳ ಕಾಲ ತಪಸ್ಸು ಮಾಡಿದ ಕಡಿದಾದ ಮರುತ್ವ ಮಲೈ ಬೆಟ್ಟವನ್ನೇರಿ ಅಲ್ಲಿ ಪಿಳ್ಳೈ ತಟ ಗುಹೆ, ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. 4 ವರ್ಷದ ಮಕ್ಕಳಿಂದ ಮೊದಲ್ಲೊಂಡು 75 ವರ್ಷದ ಹಿರಿಯರ ವರೆಗಿನ ಸುಮಾರು 70 ಮಂದಿ ಯಾತ್ರಾರ್ಥಿಗಳ ತಂಡ ಶಿವಗಿರಿ ಪುಣ್ಯ ಕ್ಷೇತ್ರ ದರ್ಶನ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅನೇಕ ಮಂದಿ ಭಕ್ತರು ಮೊದಲ ಬಾರಿಗೆ ಶಿವಗಿರಿ ಕ್ಷೇತ್ರಕ್ಕೆ ತೀರ್ಥ ಯಾತ್ರೆ ಕೈಗೊಂಡಿದ್ದು ಈ ಅವಕಾಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement







