
ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ಸಮಾಜರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರಿಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಸ್ಥಾಪಿಸಲ್ಪಟ್ಟ ಸಮಾಜ ಸೇವಾ ಸಹಕಾರಿ ಸಂಘವು 5.28ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ಕುಲಾಲ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರಕಛೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ. 1432.13 ಕೋಟಿ ವ್ಯವಹಾರ ನಡೆಸಿದ್ದು ಆರ್ಥಿಕ ವರ್ಷ 2025-26ರ ಅಂತ್ಯಕ್ಕೆ ಸಂಘದಲ್ಲಿ 9319ಎ’ ತರಗತಿ, 5921 ‘ಬಿ’ ತರಗತಿ ಸದಸ್ಯರಿದ್ದು ರೂ. 8.28ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. 22.64 ಕೋಟಿರೂ. ನಿಧಿಗಳು 62.88 ಕೋಟಿ ರೂ. ವಿನಿಯೋಗಗಳು, 264.08ಕೋಟಿ ರೂ. ಠೇವಣಾತಿಗಳು ಇದ್ದು 248.99 ಕೋಟಿ ರೂ. ಹೊರ ಬಾಕಿ ಸಾಲಗಳು ಇರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. 297.71ಕೋಟಿ ಆಗಿರುತ್ತದೆ.

ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ತರಗತಿ ಹೊಂದಿರುವ ಸಂಘವು ಸಂಪೂರ್ಣ ಗಣಕಿಕೃತ ಸಿಬಿಎಸ್ ತಂತ್ರಾಂಶದೊಂದಿಗೆ ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಆಳವಡಿಸಿಕೊಂಡಿರುತ್ತದೆ. ಸಂಘವು ಸದಸ್ಯರ ಅನುಕೂಲಕ್ಕಾಗಿ ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು, ಕೆಲವು ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವನ್ನು, ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು, ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ, ಸದಸ್ಯರ ಗಂಭೀರವಾದ ಕಾಯಿಲೆಗೆ ಆರ್ಥಿಕ ಸಹಾಯಧನ ಹೀಗೆ ಹಲವಾರು ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತ ಬಂದಿದೆ. ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಹಲವು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಅಲ್ಲದೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಂಘವು ದಕ್ಷಿಣಕನ್ನಡ ಜಿಲ್ಲೆಯ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಸಂಘದ 18 ನೇ ಶಾಖೆಯು ಉಳ್ಳಾಲ ತಾಲೂಕಿನ ಬೋಳಿಯಾರು ಎಂಬಲ್ಲಿ ಕೇಶವ ಎಸ್. ಭಂಡಾರಿಯವರ ಕಟ್ಟಡದಲ್ಲಿ ಮೇ.17ರಂದು ಆದಿತ್ಯವಾರ ಉದ್ಘಾಟನೆಗೊಳ್ಳಲಿದೆ ಎಂದು ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.


Advertisement







