
ಬಂಟ್ವಾಳ: ತಾಲೂಕಿನ ಬಿಳಿಯೂರು ಗ್ರಾಮದ ಕುಲಗದ್ದೆ ಎಂಬಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು.
ಬೆಳಿಗ್ಗೆ 9 ಗಂಟೆಯ ಶುಭಮುಹೂರ್ತದಲ್ಲಿ ವರ್ಮುಡಿ ವೇ. ಮೂ. ಗೋಪಾಲಕೃಷ್ಣ ಭಟ್ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ
ಸಂಪತ್ತನ್ನು ದಾನಧರ್ಮದ ಮೂಲಕ ಪರಿವರ್ತನೆ ಮಾಡಿದರೆ ಪುಣ್ಯ ಸಂಚಯವಾಗುತ್ತದೆ. ಭಕ್ತಿಯ ಮೂಲಕ ಮುಕ್ತಿಯೆಡೆಗೆ ಸಾಗಲು ಶಿವ ನಾಮ ಸಂಕೀರ್ತನೆಯಿಂದ ಸಾಧ್ಯವಿದೆ. ಇಲ್ಲಿ ಕೇವಲ ದೇವಸ್ಥಾನಕ್ಕೆ ಮಾತ್ರವಲ್ಲದೆ ಧರ್ಮ ಹಾಗೂ ಸಂಸ್ಕೃತಿ ಯ ಪುನರುತ್ಥಾನಕ್ಕೂ ಶಿಲಾನ್ಯಾಸವಾಗಿದೆ ಎಂದ ಅವರು ಬಿಳಿಯೂರಿನಲ್ಲಿ ಉತ್ತಮ ಜನರಿರುವುದರಿಂದ ಶೀಘ್ರದಲ್ಲಿ ಕ್ಷೇತ್ರ ನಿರ್ಮಾಣ ಕಾರ್ಯ ಆಗಲಿದೆ ಎಂದರು.


ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮನಶುದ್ದಿ, ಭಾವಶುದ್ದಿ, ಕರ್ಮ ಶುದ್ಧಿಯೊಂದಿಗೆ ಧನಾತ್ಮಕತೆಯಿಂದ ಚಿಂತನೆ ಮಾಡಿದಾಗ ದೇವರನ್ನು ಕಾಣಲು ಸಾಧ್ಯವಿದೆ. ಇದು
ಇತಿಹಾಸ ನಿರ್ಮಿಸುವ ದೇಗುಲವಾಗಿ ರೂಪುಗೊಳ್ಳಲಿದೆ.
ಎಂದರು.


ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿ ಕುಲಗದ್ದೆಯ ಈ ಸನ್ನಿಧಾನ ನಮ್ಮ ಪಾಪವನ್ನು ದೂರ ಮಾಡಿ ನಮ್ಮನ್ನು ರಕ್ಷಣೆ ಮಾಡುತ್ತದೆ. ದೇವಾಲಯ ನಿರ್ಮಾಣದಿಂದ ದೇಶ ನಿರ್ಮಿಸಲು ಸಾಧ್ಯವಿದೆ ಎಂದರು.
ಮುಂಬೈ ಉದ್ಯಮಿ ಬಾಲಕೃಷ್ಣ ರೈ ತಿಪ್ಪಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಿಳಿಯೂರು ಗುತ್ತು ಧನ್ಯಕುಮಾರ್ ರೈ ಸಭಾಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ದೈವಜ್ಞರಾದ ಮನೋಜ್ ಬಲ್ಯಾಯ ಸಾರ್ಥಕ್ ಬಲ್ಯಾಯ, ವರ್ಮುಡಿ ಗೋಪಾಲಕೃಷ್ಣ ತಂತ್ರಿ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಜಾಗ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ , ಪುತ್ತಿಲ ಪರಿವಾರ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿಯ ದಂತವೈದ್ಯ ಡಾ. ರಾಜರಾಮ್ ಬಿ.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಉಮಾಮಹೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಐ.ಕೆ ರಮಾನಾಥ ಕುಲಾಲ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ಕಾರ್ಯಧ್ಯಕ್ಷ ಹರೀಶ್ ನೀರಾಳ
ಗೌರವಾಧ್ಯಕ್ಷರಾದ ನಿವೃತ್ತ ಬಿ ಎಸ್ ಎಫ್ ಡೆಪ್ಯುಟಿ ಕಮಾಡೆಂಟ್ ಡಿ.ಚಂದಪ್ಪ ಮೂಲ್ಯ, ಮಾಧವ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೆರ್ನೆ ಸಿ. ಎ ಬ್ಯಾಂಕಿನ ತನಿಯಪ್ಪ ಪೂಜಾರಿ ಸ್ವಾಗತಿಸಿದರು, ಕೃಷ್ಣಪ್ಪ ಪೂಜಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಗಣೇಶ್ ರಾಜ್ ವಂದಿಸಿದರು, ಲೋಕೇಶ್ ಬೆತ್ತೋಡಿ
ಕಾರ್ಯಕ್ರಮ ನಿರೂಪಿಸಿದರು.
Advertisement







