
ಇದೊಂದು ತಮಾಷೆಯೊ ಅಥವಾ ನನ್ನ ಪಾಲಿನ ದುರಂತವೋ ಗೊತ್ತಿಲ್ಲ; ಆದರೆ ಹೇಳಲೇಬೇಕಾಗಿದೆ. ನನ್ನ ಕೈ ಕಾಲುಗಳಿಗೆ ಲಾಠಿ ಪ್ರಹಾರ ಮಾಡಿ ರಕ್ತ ಚಿಮ್ಮಿಸಿದ್ದ ಕಾರಂತರ ಮಾತೃಶ್ರೀ ಅವರು ತೀರಿಕೊಂಡು ಆಗ ಹೆಚ್ಚು ಸಮಯವಾಗಿರಲಿಲ್ಲ. ನನಗೆ ಇಂದೂ ಕೂಡಾ ಸರಿಯಾಗಿ ನೆನಪಿದೆ, ಅವರ ಮಾತೃಶ್ರೀ ಅವರು ತೀರಿಕೊಂಡ ಹನ್ನೆರಡನೇ ದಿವಸ ನನಗೆ ಪವಮಾನ ಸೂಕ್ತ ಪಾಠ ಮಾಡಿದ್ದ ಕೃಷಿ ಕೆದಿಲಾಯರೆಂದೇ ಪ್ರಸಿದ್ಧರಾಗಿದ್ದ ನಾರಾಯಣ ಕೆದಿಲಾಯರೊಂದಿಗೆ ಕಾರಂತರ ಮನೆಗೆ ಹೋಗಿದ್ದೆ ಮಾತ್ರವಲ್ಲ, ಸ್ವರ್ಗ ಪ್ರಾಪ್ತಿಗಾಗಿ ಮಾಡಿದ್ದ ಪವಮಾನ ಹೋಮದಲ್ಲಿ ನಾನೂ ಸಕ್ರಿಯವಾಗಿ ಭಾಗವಹಿದ್ದೆ; ಆದರೆ ನನ್ನ ದುರಂತ ನೋಡಿ, ಅದೇ ಕಾರಂತರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡುವ ಮೂಲಕ ನರಕ ಯಾತನೆ ಅನುಭವಿಸುವಂತೆ ಮಾಡಿದ್ದರು.ಪಾಪ ಅವರಾದರೋ ಸರಕಾರದ ಕಾನೂನಿಂತೆ ವರ್ತಿಸಿದ್ದರು.



ಆದರೆ ಕಾರಂತರ ಮಾತೃಶ್ರೀಯವರಿಗೆ ಸ್ವರ್ಗಕ್ಕಾಗಿ ಪ್ರಾರ್ಥನೆ, ಪ್ರಾರ್ಥಿಸಿದ ನನಗಾದರೋ ನರಕ! ಎಂತಹ ವೈರುಧ್ಯ!!
ಹೊಡೆತದ ನೋವು ವಾಸಿಯಾದ ನಂತರ ಮತ್ತೆ ಸತ್ಯಾಗ್ರಹಕ್ಕೆ ಧುಮುಕಿದೆವು. ಅದೇ ಉಪ್ಪಿನಂಗಡಿಯಲ್ಲಿ ನಮ್ಮ ಸಾರ್ವಜನಿಕ ಪ್ರತಿಭಟನಾ ಸಭೆ. ಎಂದಿನಂತೆ ನಮ್ಮನ್ನು ಬಂಧಿಸಿ ಸ್ಟೇಷನ್ನಿಗೆ ಕಳುಹಿಸಿದರು. ಆವಾಗ ನಾಯರ್ ಅನ್ನುವವರು ಸಬ್ ಇನ್ಸ್ಪೆಕ್ಟರಾಗಿದ್ದರು, ಬಹಳ ಸಾತ್ವಿಕ ವ್ಯಕ್ತಿ. ಔಪಚಾರಿಕವಾಗಿ ನಮ್ಮೆಲ್ಲರ ಹೇಸರು ಕೇಳಿ, ಇನ್ನು ಮುಂದಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಂಡರು. ನನ್ನನ್ನು ದಬಾಯಿಸಿ ಹೆಸರು ಕೇಳಿದಾಗ, ತುರ್ತು ಪರಿಸ್ಥಿತಿಯ ಕುರಿತು ಮೃದು ಧೋರಣೆ ತಾಳಿದ್ದ ಬೇರೊಬ್ಬರ ಮಗನ ಹೆಸರನ್ನು ಹೇಳಿ ಮುಚ್ಚಳಿಕೆ ಬರೆದು ಕೊಟ್ಟಿದ್ದೆ, ಅಲ್ಲೇ ಇದ್ದ ನನ್ನ ಮಾವ ಇಜ್ಜಾವು ಸುಬ್ಬರಾಯರು ನಾನು ಹೇಳಿದ ಸುಳ್ಳು ಹೆಸರನ್ನು ಕೇಳಿ ನಗುತ್ತಾ ಕೂತಿದ್ದರು, ಅವರು ನಮ್ಮ ಬೆಂಬಲಿಗರು, ಪೊಲೀಸರಿಗೆ ಪಾಪ ಗೊತ್ತೇ ಆಗಿಲ್ಲ.
ಎರಡು ದಿನ ಕಳೆದ ಬಳಿಕ ಮತ್ತೆ ಪ್ರತಿಭಟನೆಗೆ ಇಳಿದೆವು. ಪೊಲೀಸರಿಗಾದರೋ ನನ್ನ ಮುಖ ಪರಿಚಯವಾಗಿ ದಾಬಾಯಿಸಿದ್ದಲ್ಲದೆ ನಾನು ಬರೆದು ಕೊಟ್ಟಿದ್ದ ಮುಚ್ಚಳಿಕೆಯನ್ನು ತೋರಿಸಿ ಗದರಿದರು; ಆದರೆ ನನ್ನ ಜತೆಯಲ್ಲಿದ್ದವರು ಮುಚ್ಚಳಿಕೆ ನನ್ನದಲ್ಲವೆಂದು ಹೇಳಿ ಪೊಲೀಸರ ಬಾಯಿ ಮುಚ್ಚಿಸಿದ್ದು ಸುಳ್ಳಲ್ಲ.
ಮುಂದಕ್ಕೆ ಹಲವು ವರ್ಷಗಳ ನಂತರ ಇದೇ ಯಸ್ ಐ ನಾಯರ್ ಅವರ ಮಗಳು ನನ್ನ ವಿದ್ಯಾರ್ಥಿನಿಯಾಗಿ ಪಾಠ ಕೇಳಿದ್ದಳೆಂಬುದು ಆಕೆಯಿಂದಲೇ ಸ್ವಲ್ಪ ಸಮಯದ ನಂತರ ನನಗೆ ತಿಳಿದುಬಂತು.
ಮುಂದುವರಿಯುತ್ತದೆ…..
ರಾಜಮಣಿ ರಾಮಕುಂಜ.
Advertisement







