ಬಂಟ್ವಾಳ: ಸಮಾಜಸೇವಾ ಸಹಕಾರಿ ಸಂಘ ನಿ. ಬಂಟ್ವಾಳ ಇದರ ವತಿಯಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಭಾನುವಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ದೂರದೃಷ್ಟಿಯ ಫಲವಾಗಿ ಸಮಾಜಸೇವಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿದೆ. ಬಡಜನರಿಗೆ ಆರ್ಥಿಕ ಸಹಕಾರವನ್ನು ನೀಡುವುದರ ಜೊತೆಗೆ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವ ಉದ್ದೇಶದಿಂದ ಡಾ. ಬಾಳಪ್ಪ ಅವರ ಆಶಯದಂತೆ ಸಂಘ ನಿರಂತರವಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರಮ, ಗ್ರಾಹಕರ ಸಹಕಾರದಿಂದಾಗಿ ಸಮಘ ಲಾಭದಾಯಕವಾಗಿ ನಡೆಯುತ್ತಿದ್ದು ಅದರ ಒಂದಂಶವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಿದ್ದು ವಿದ್ಯಾರ್ಥಿಗಳು ಈ ಮೊತ್ತವನ್ನು ವಿದ್ಯಾಭ್ಯಾಸಕ್ಕೆ ಸದುಪಯೋಗ ಪಡಿಸಬೇಕೆಂದು ತಿಳಿಸಿದರು.
ಕೆಐಸಿಎಂ ಮೂಡಬಿದಿರೆ ಇದರ ಪ್ರಥಮದರ್ಜೆ ಸಹಾಯಕ ಹೊನ್ನಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 160 ಮಂದಿ ಸ್ನಾತಕ್ಕೋತರ ವಿದ್ಯಾಭ್ಯಾಸ ಪಡೆಯುವ ವಿದ್ಯಾರ್ಥಿಗಳಿಗೆ ಒಟ್ಟು 6.88 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಲಕ್ಷ್ಮೀ ಅಮೂಲ್ಯ ಸ್ವಸಹಾಯ ಸಂಘದ ಸದಸ್ಯೆ ದೇವಕಿ ಅನಾರೋಗ್ಯದಿಂದ ಮೃತಪಟ್ಟಿದ್ದು ಅವರ ವಾರಸುದಾರರಿಗೆ 25ಸಾವಿರ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು. 2023-24ನೇ ಸಾಲಿನ ಸಹಕಾರಿ ಶಿಕ್ಷಣ ನಿಧಿ ಚೆಕನ್ನು ಕೆಐಸಿಎಂ ಮೂಡಬಿದಿರೆ ಇದರ ಪ್ರಥಮದರ್ಜೆ ಸಹಾಯಕ ಹೊನ್ನಪ್ಪ ಅವರ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ.ಕ್ಕೆ ಹಸ್ತಾಂತರಿಸಲಾಯಿತು. ಕುಕ್ಕಾಜೆ ಶಾಖೆ ವ್ಯವಸ್ಥಾಪಕಿ ಕಮಲ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕ ಭೋಜಮೂಲ್ಯ ಪ್ರಾಸ್ತವಿಕ ಮಾತುಗಳನ್ನಾಡಿದರು. ವಿಟ್ಲ ಶಾಖೆ ವ್ಯವಸ್ಥಾಪಕ ಸುಂದರ ಮೂಲ್ಯ ವಂದಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ.ಕೆ. ಕಾರ್ಯಕ್ರಮ ನಿರೂಪಿಸಿದರು.