ಬಂಟ್ವಾಳ: 400 ಕೆ.ವಿ.ವಿದ್ಯುತ್ ಪ್ರಸರಣ ತಂತಿಗಳನ್ನು ಅಳವಡಿಸಲು ಟವರ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಕಲ್ಲಡ್ಕದ ಪೂರ್ಲಿಪಾಡಿಯ ಬಳಿ ಬಾಯಿಲ ಎಂಬಲ್ಲಿನ ಖಾಸಗಿ ಜಮೀನಿನಲ್ಲಿ ಮರಗಳನ್ನು ಕಡಿಯುತ್ತಿದ್ದ ವೇಳೆ ರೈತ ಸಂಘ ಹಸಿರು ಸೇನೆಯ ಮುಖಂಡರು ಮುತ್ತಿಗೆ ಹಾಕಿ ಕೆಲಸವನ್ನು ತಡೆದ ಘಟನೆ ಮಂಗಳವಾರ ನಡೆದಿದೆ. ರಾಜಾರೋಷವಾಗಿ ಯಂತ್ರದ ಮೂಲಕ ಮರಗಳನ್ನು ಉರುಳಿಸುತ್ತಿದ್ದ ವೇಳೆ ರೈತ ಸಂಘದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ಮರಕಡಿಯುತ್ತಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ.
ರೈತರು ಹಾಗೂ ಸ್ಥಳೀಯರ ವಿರೋಧದ ನಡುವೆಯು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಸ್ಟೆರ್ಲೈಟ್ ಪವರ್ ಕಂಪನಿ ಬಂಟ್ವಾಳ ತಾಲೂಕಿನಲ್ಲಿ ಹಂತಹಂತವಾಗಿ ಟವರ್ ನಿರ್ಮಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳ ಕಸ್ಬ ಗ್ರಾಮದ ದರ್ಬಳಿಕೆಯಲ್ಲಿ ಟವರ್ ನಿರ್ಮಿಸಲು ರೈತ ಮುಖಂಡರು ಹಾಗೂ ಗ್ರಾಮಸ್ಥರು ಹೋರಾಟ ನಡೆಸಿ ವಿರೋಧ ವ್ಯಕ್ತಪಡಿಸಿದರೂ ಅಂತಿಮವಾಗಿ ಕಂಪೆನಿ ಟವರ್ ನಿರ್ಮಿಸುತ್ತಿದೆ. ಇದೀಗ ಬಾಯಿಲದಲ್ಲೂ ಸ್ಥಳೀಯ ರೈತರಿಗೆ ಯಾವುದೇ ಮಾಹಿತಿ ಹಾಗೂ ನೋಟೀಸ್ ನೀಡದೆ ಟವರ್ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ. ರೈತರ ವಿರೋಧದ ಹಿನ್ನಲೆಯಲ್ಲಿ ಕಂಪೆನಿ ಅಧಿಕಾರಿಗಳು ತೆರಳಿದ್ದು ಆದೇಶದೊಂದಿಗೆ ನಾಳೆ ಬರುವುದಾಗಿ ತಿಳಿಸಿ ಹೋಗಿದ್ದಾರೆ.
ಸ್ಟ್ಯಾಂಡರ್ಡ್ ಆಪರೇಷನ್ ಪ್ರೋಸಿಜರ್ ಎನ್ನುವ ಕೆಂದ್ರ ಸರ್ಕಾರದ ನಿರ್ದೇಶನದಂತೆ ಕಂಪೆನಿ ಸಂಬಂಧಪಟ್ಟವರಿಗೆ ನೋಟೀಸು ನೀಡಿ ಒಪ್ಪಿಗೆ ಪಡೆದು ಕೆಲಸ ನಡೆಸಬೇಕು ಆದರೆ ಇಲ್ಲಿ ಯಾವುದೇ ನೊಟೀಸ್ ನೀಡದೆ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೇ ಕಂಪೆನಿಯ ಸೂಚನೆಯಂತೆ ಕಾರ್ಮಿಕರು ಮರಗಳನ್ನು ಕಡಿದು ಹಾಕಿದ್ದಾರೆ. ಬಲತ್ಕಾರವಾಗಿ ಕಾಡುಗಳನ್ನು ಕಡಿಯಲು ಬಿಡುವುದಿಲ್ಲ ಎಂದು ರೈತ ಸಂಘದ ಮುಖಂಡ ರಾಜೀವ ಗೌಡ ಎಚ್ಚರಿಸಿದರು.
ಖಾಸಗಿ ಜಮೀನುಗಳನ್ನು ಕನ್ವರ್ಷನ್ ಮಾಡಿ ಬಳಿಕ ಕಾಮಗಾರಿ ನಡೆಸಬೇಕು ಎನ್ನುವ ನಿಯಮವಿದೆ. ಆದರೆ ಕಂಪೆನಿ ಅಧಿಕಾರಿಗಳು ಆ ನಿಯಮವನ್ನು ಗಾಳಿಗೆ ತೂರಿ ಯಾವುದೋ ಒಂದು ರಿಕ್ವೆಸ್ಟ್ ಲೆಟರ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಅನುಮತಿಯನ್ನು ಪಡೆದುಕೊಂಡು ಬಂದು ಕೆಲಸ ಮಾಡಬೇಕು ಎನ್ನುವುದು ರೈತ ಸಂಘದ ಆಗ್ರಹ. ವೀರಕಂಬ ರಕ್ಷಿತಾರಾಣ್ಯದಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದವರೆಗೆ ತಂತಿ ಹಾದು ಹೋಗಲು ೪ ಟವರ್ಗಳು ನಿರ್ಮಾಣಗೊಳ್ಳಲಿದೆ. ಇದಕ್ಕೆ ೩ ಸಾವಿರ ಜಾತಿಯ ಮರಗಳು ನಾಶವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಗಮ ಹರಿಸಬೇಕಾಗಿದೆ. ಈ ಯೋಜನೆಯ ಎಸ್ಒಪಿ ಪ್ರಕಾರ ಶೇ. ೮೫ ಸಂತ್ರಸ್ತರ ಒಪ್ಪಿಗೆ ಪಡೆದು ಕೆಲಸ ಮಾಡಬೇಕು. ಆದರೆ ಕಂಪೆನಿ ಯಾರ ಒಪ್ಪಿಗೆಯನ್ನು ಪಡೆದಿಲ್ಲ. ಕೆಲವರಿಗೆ ಹಣದ ಆಮಿಷ ನೀಡಿ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಯೋಜನೆ ಪೂರ್ಣಗೊಳ್ಳುತ್ತಿದೆ ಎಂದು ನ್ಯಾಯಲಯಕ್ಕೆ ಸುಳ್ಳು ಮಾಹಿತಿ ನೀಡಲು ಸಿದ್ದತೆ ಮಾಡುತ್ತಿದ್ದಾರೆ. ರೈತರಿಗೆ ಆಗುವ ಅನ್ಯಾಯವನ್ನು ಸರಕಾರ ನಿಲ್ಲಿಸಬೇಕು. ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮರಗಳನ್ನು ಕಡಿಯಲು ಟ್ರಿ ಕಮಿಟಿ ಮಾಡಬೇಕು. ಅದಕ್ಕೆ ೫ ಮಂದಿ ಸದಸ್ಯರನ್ನು ನೇಮಿಸಿ ಆ ಸಮಿತಿಯ ನಿರ್ಣಯದ ಮೂಲಕ ಮರ ಕಡಿಯಲು ತೀರ್ಮಾನ ಕೈಗೊಳ್ಳಬೇಕು. ಅದೆಲ್ಲವನ್ನು ಕಂಪೆನಿ ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರದೊಂದಿಗೆ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರ ಎಂದು ರೈತ ಸಂಘದ ಮುಖಂಡ ಶ್ಯಾಂ ವಿಟ್ಲ ಆರೋಪಿಸಿದರು.
ಈ ಸಂದರ್ಭ ರೈತ ಸಂಘದ ಮುಖಂಡರಾದ ಆನಂದ ಸಾಲ್ಯಾನ್ ಶಂಭೂರು, ಚಿತ್ರರಂಜನ್ ನೆಕ್ಕಿಲಾರು, ಅಣ್ಣುಗೌಡ, ಅಲೆಕ್ಸ್ ಸಿಕ್ವೇರಾ, ಅರುಣ್ ಡಿಸೋಜಾ ಅಗ್ರಹಾರ್, ಬೆನಡಿಕ್ಟ್ ಕಾರ್ಲೋ, ವಿನ್ಸೆಂಟ್ ಡೇಸಾ, ಸಂಜೀವ ಗೌಡ ಹಾಗೂ ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಂಪೆನಿಯ ಅಧಿಕಾರಿಗಳು ಹಾಜರಿದ್ದರು.