ಕುಪ್ಪೆಪದವು: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಇದರ ಆಶ್ರಯದಲ್ಲಿ ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್ ಲೈನ್ ವಿರೋಧಿಸಿ ಕುಪ್ಪೆ ಪದವು ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ 400 ಕೆ.ವಿ. ವಿದ್ಯುತ್ ಪ್ರಸರಣ ಜಾಲಾದಿಂದ ಜನರಿಗೆ ಇಷ್ಟು ತೊಂದರೆ ಯಾಗುತ್ತಿದ್ದರೂ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು. ಕಂಪೆನಿಯಿಂದ ಹಣ ಪಡೆದು ಕೊಂಡು ನಾಯಕತ್ವ ವಹಿಸಿ ಕೊಂಡು ಬರುವವರನ್ನು ದೂರ ಇಡಬೇಕು, ಭೂಮಿಗೆ ಅನ್ಯಾಯ ಮಾಡಿದವರು ಯಾರೂ ಸುಖವಾಗಿಲ್ಲ. ಬೇರೆ ಕಂಪೆನಿಯನ್ನು ಬೆಳೆಸಲು ನಮ್ಮಭೂಮಿಯನ್ನು ಕಂಪೆನಿಗೆ ಮಾರುವುದು ಸರಿಯಲ್ಲ ಎಂದು ಆರೋಪಿಸಿದರು.
ಹೋರಾಟಗಾರ ಚಂದ್ರಹಾಸ ಶೆಟ್ಟಿ ಇನ್ನಾ ಮಾತನಾಡಿ 400 ಕೆ.ವಿ ವಿದ್ಯುತ್ ಪ್ರಸರಣ ಅನುಷ್ಠಾನಗೊಂಡರೆ ತೊಂದರೆಗೆ ಒಳಗಾಗುವುದು ಭೂಮಿ ಮಾರಿದವರಲ್ಲ. ಭೂಮಿ ಮಾಲಿಕರು ಪರಿಹಾರ ಪಡೆದು ಬೇರೆಡೆ ಜೀವನ ಭದ್ರ ಪಡಿಸಿಕೊಳ್ಳುತ್ತಾರೆ. ಸಮಸ್ಯೆ ಅನುಭವಿಸುವವರು ಇಲ್ಲಿ ಇರುವವರು, ಸುತ್ತಮುತ್ತಲಿನ ಜನರು. 46 ಮೀಟರ್ ಅಗಲದ ಕಾರಿಡಾರ್ 115 ಕಿ.ಮಿ. ದೂರದ ವರೆಗೆ ತಂತಿ ಹಾದು ಹೋಗುವ ಪ್ರದೇಶದ ಮನೆ, ದೇವಸ್ಥಾನ ದೈವಸ್ಥಾನ ಕೃಷಿ ಸಂಪೂರ್ಣ ನಾಶವಾಗುತ್ತದೆ ಎಂದರು.
ಸರಕಾರದ ಯಾವುದೇ ಯೋಜನೆಗಳು ಅನುಷ್ಠಾನವಾದಾಗ ಅದರ ಮಾಹಿತಿ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಆದರೆ ಜನರಿಗೆ ತಿಳಿಯದ ರೀತಿಯಲ್ಲಿ ಷಡ್ಯಂತ ರೂಪಿಸುವಂತೆ ಬೆರಳೆಣಿಕೆಯ ಪ್ರಸರಣ ಇರುವ ಪತ್ರಿಕೆಯಲ್ಲಿ ಈ ಯೋಜನೆಯ ಅನುಷ್ಠಾನದ ಬಗ್ಗೆ ಪ್ರಕಟಿಸಲಾಗಿದೆ. ಇದು ಜನರಿಗೆ ಉಪಯೋಗವಾಗುವ ಯೋಜನೆಯಲ್ಲ ಎನ್ನುವುದು ಇದರದಲೇ ಸಾಬೀತಾಗಿದೆ.
ಗ್ರಾಮದ ಜನರನ್ನು ಸೇರಿಸಿಕೊಂಡು ಜನವಿರೋಧಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ನೈಜ ಜನಪ್ರತಿನಿಧಿಗಳು ಜನಾಂದೋಲನ ಮಾಡಬೇಕಾಗಿದೆ. ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಬೆಂಬಲಿಸದಿದ್ದರೆ ಅವರು ಕೃತಘ್ನರಾದಂತೆ. ಈ ಹೋರಾಟದಲ್ಲಿ ರಾಜಿ ಮಾಡಿಕೊಂಡಲ್ಲಿ ನಾವು ನಾಶವಾದಂತೆ. ಜಾತಿ, ಧರ್ಮ, ಪಕ್ಷ ಬಿಟ್ಟು ಹೋರಾಟ ಮಾಡಬೇಕು ಎಂದರು. ಸುಕೇಶ್ ಚಂದ್ರ ಶೆಟ್ಟಿ ಮಾತನಾಡಿ ಅಗತ್ಯ ಇರುವಲ್ಲಿ ನಾವು ಪ್ರತಿಭಟಿಸಬೇಕು, ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಪ್ರಮುಖರಾದ ದಯಾನಂದ ಶೆಟ್ಟಿ ಕುಳವೂರ ಗುತ್ತು
ಎಂ.ಸುಬ್ರಹ್ಮಣ್ಯ ಭಟ್, ಮುರುವ ಮಹಾಬಲ ಭಟ್
ರಾಜೀವ ಗೌಡ ವಿಟ್ಲ, ಆಲ್ಫೋನ್ಸ್ ಡಿಸೋಜಾ
ಕೃಷ್ಣಪ್ರಸಾದ್ ಭಟ್ , ರೊಷನ್ ಲೋಬೋ
ಶೇಖಬ್ಬ ಮೊದಲಾದವರು ಉಪಸ್ಥಿತರಿದ್ದರು.
ಕುಳವೂರು ಹಾಗೂ ಕಿಲೆಂಜಾರರು ವ್ಯಾಪ್ತಿಯ ರೈತರು ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಮುತ್ತೂರು ಹಾಗೂ ಕುಪ್ಪೆಪದವು ಪಿಡಿಓ ಅವರಿಗೆ ಮನವಿ ಸಲ್ಲಿಸಲಾಯಿತು.