ಬಂಟ್ವಾಳ: ಕ್ಷಯ ರೋಗಿಗಳ ಆರೋಗ್ಯ ದೃಷ್ಟಿಯಿಂದ ಪ್ರತಿ ತಿಂಗಳು ಆಹಾರದ ಕಿಟ್ ವಿತರಿಸುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮೂರ್ತಿ ಹೇಳಿದರು.
ಕ್ಷಯ ಮುಕ್ತ ಭಾರತ ನಿರ್ಮಾಣ ಕಾರ್ಯಕ್ರಮದಂಗವಾಗಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ವತಿಯಿಂದ ನಡೆದ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕ್ಷಯರೋಗದ ಜಾಗೃತಿಯ ಬಗ್ಗೆ ಹಾಗೂ ರೋಗ ನಿವಾರಣೆ ಮಾಡುವ ದೃಷ್ಟಿಯಿಂದ ಸೇವಾಂಜಲಿ ಕೇಂದ್ರ ಸರಕಾರದ ಜೊತೆ ಕೈ ಜೋಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಕ್ಷಯ ರೋಗಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ತುಂಬೆ ಯಾದವ ಸುವರ್ಣ ಮಾತನಾಡಿ ರೋಗಿಗಳಿಗೆ ಔಷಧಿ, ಆಹಾರದ ಜೊತೆಗೆ ಪ್ರೀತಿಯ ವಾತವರಣ ಇದ್ದಾಗ ಶೀಘ್ರ ರೋಗ ಗುಣಪಡಿಸಲು ಸಾಧ್ಯವಿದೆ. ಅಂತಹ ಸೇವಾ ಕಾರ್ಯವನ್ನು ಸೇವಾಂಜಲಿ ಸಂಸ್ಥೆ ಮಾಡುತ್ತಿದೆ ಎಂದರು.
ಪುದು ಗ್ರಾ.ಪಂ. ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಎಎಸೈ ನಾಗರಾಜ್ ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆಯ ಉದ್ದೇಶ ತಿಳಿಸಿದರು.
ಪ್ರಮುಖರಾದ ಕೃಷ್ಣ ತುಪ್ಪೆಕಲ್ಲು, ನಾರಾಯಣ ಬಡ್ಡೂರು, ಕೇಶವ ದೋಟ, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ, ಪದ್ಮನಾಭ ಕಿದೆಬೆಟ್ಟು, ಮಧುರಾಜ್ ಶೆಟ್ಟಿ ಹಾಜರಿದ್ದರು.