
ಬಂಟ್ವಾಳ: ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ವಿಸ್ತಾರವಾಗಿ ಬೆಳೆದಿದ್ದು ಸಹಕಾರಿ ಸಂಘಗಳ ಮೂಲಕ ಸಮಾಜದ ಕೆಲಸವನ್ನು ಮಾಡಲು ಸುಲಭ ಸಾಧ್ಯವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಮಾರ್ನಬೈಲು ಸ್ಥಳಾಂತರಿತ ಶಾಖೆಯನ್ನು ಭಾನುವಾರ ಮಾರ್ನಬೈಲಿನ ಸಿರಿಮುಡಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಇದ್ದ ಕಚೇರಿಯಿಂದ ಸುಸಜ್ಜಿತವಾದ ಹಾಗೂ ವಿಶಾಲವಾದ ಕಚೇರಿಗೆ ಸ್ಥಳಾಂತರಿಸುವ ಮೂಲಕ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ನೀಡುವ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಬದ್ದತೆ ಕಾಣಿಸುತ್ತಿದೆ, ಸಹಕಾರಿ ಸಂಘಗಳ ಪೈಕಿ ತನ್ನದೇ ಆದ ಛಾಪನ್ನು ಮೂಡಿಸಿ ಅತ್ಯುತ್ತಮವಾದ ಸಹಕಾರಿ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮಾಜದ ದುರ್ಬಲ ವರ್ಗದವರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಆರಮಭಗೊಂಡ ಈ ಸಂಘ ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಸಿಬ್ಬಂದಿಗಳು ಕೊಂಡಿಯಾಗಿ ಇದ್ದುಕೊಂಡು ಕಾರ್ಯನಿರ್ವಹಿಸಿದಾಗ ಸಂಘ ಉತ್ತಮವಾಗಿ ಬೆಳೆಯಲಿದೆ.
ಗ್ರಾಹಕರು ಸಾಲ ಪಡೆಯುವುದು ಮಾತ್ರವಲ್ಲದೆ ಸಕಾಲದಲ್ಲಿ ಅದನ್ನು ಮರು ಪಾವತಿ ಮಾಡುವ ಮೂಲಕ ಸಹಕಾರಿ ಸಂಘಗಳ ಬೆಳವಣಿಗೆಗೆ ಸಹಕಾರ ನೀಡುವಂತೆ ಅವರು ತಿಳಿಸಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿಯ ಪರಿಶ್ರಮದಿಂದ ನಮ್ಮ ಸಂಘ ಅಭಿವೃದ್ದಿಯ ಹಾದಿಯಲ್ಲಿ ಸಾಗುತ್ತಿದ್ದು ಎಲ್ಲಾ ಕಾರ್ಯಗಳನ್ನು ಮಹಿಳೆಯರೇ ನಿಭಾಯಿಸುತ್ತಿದ್ದಾರೆ. ಸಂಘದ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬರುತ್ತಿದ್ದು ಕೆಲವೇ ದಿನಗಳಲ್ಲಿ ಇನ್ನೆಡರಡು ಹೊಸ ಶಾಖೆಗಳು ಆರಂಭಗೊಂಡು ಗ್ರಾಹಕರಿಗೆ ಸೇವೆ ನೀಡಲಿದೆ. ಒಟ್ಟು ೨೫ ಶಾಖೆಗಳನ್ನು ಹೊಂದುವ ಗುರಿ ಇದ್ದು ಇನ್ನಷ್ಟು ಮಹಿಳೆಯರಿಗೆ ಉದ್ಯೋಗವಕಾಶಗಳು ಈ ಮೂಲಕ ಸಿಗಲಿದೆ ಎಂದರು.

ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಮಹೇಶ್ ಭಟ್ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಸುಮಂಗಳ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ನಿರ್ದೇಶಕ ಸಂದೀಪ್ ಕುಮಾರ್ ಮಾರ್ನಬೈಲು, ಮಾಜಿ ಸೈನಿಕ ಅಲೆಕ್ಸಾಂಡರ್ ಲೋಬೋ, ಸಜೀಪಮುನ್ನೂರು ಗ್ರಾ.ಪಂ ಸದಸ್ಯ ಗಣೇಶ್ ಕುಲಾಲ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಉಪ ಸಮಿತಿಯ ಅಧ್ಯಕ್ಷ ಗೋಪಾಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ, ಅಶೋಕ್ ಪೂಜಾರಿ ಕೋಮಾಲಿ, ಕೆ.ಸುಜಾತ ಮೋಹನದಾಸ, ವಾಣಿ ವಸಂತ್, ಅರುಣ್ ಕುಮಾರ್, ಆಶಿಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಎಂಜಿನಿಯರ್ ಶೈಲೇಶ್ ಪೂಜಾರಿ ಹಾಗೂ ಸಂಘದ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ನಿರ್ದೇಶಕರಾದ ಜಯಶಂಕರ್ ಕಾನ್ಸಲೆ ಸ್ವಾಗತಿಸಿ ವಂದಿಸಿದರು. ನಿರ್ದೇಶಕ ಗಿರಿಶ್ ಕುಮಾರ್ ಪೆರ್ವ ಹಾಗೂ ಸಿಬ್ಬಂದಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
