ಬಂಟ್ವಾಳ: 2023 ರಾಜ್ಯ ವಿಧಾನಸಭಾ ಚುನಾವಣಾ ಕರ್ತವ್ಯ ನಿರ್ವಹಿಸಿದ ವಾಹನಗಳ ನಿಗದಿತ ಬಾಡಿಗೆಯನ್ನು ನೀಡದೆ ಅನ್ಯಾಯವೆಸಗಿರುವ ಬಗ್ಗೆ ದ.ಕ. ಜಿಲ್ಲಾ ಟೂರಿಸ್ಟ್ ಕಾರು ವ್ಯಾನು ಚಾಲಕರ ಮಾಲಕರ ಸಂಘ ಬಿ.ಸಿ.ರೋಡು ಇದರ ವತಿಯಿಂದ ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ದ.ಕ. ಜಿಲ್ಲಾ ಟೂರಿಸ್ಟ್ ಕಾರು ವ್ಯಾನು ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸದಾನಂದ ಗೌಡ ನಾವೂರು ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಚುನಾವಣ ಆಯೋಗ ವಾಹನಗಳಿಗೆ ದಿನ ಬಾಡಿಗೆಯನ್ನು ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಅದರಂತೆಯೇ ನಾವು ಚುನಾವಣ ಕರ್ತವ್ಯಕ್ಕೆ ವಾಹನವನ್ನು ಒದಗಿಸಿಕೊಟ್ಟಿದ್ದೇವೆ. ಆದರೆ ಬಾಡಿಗೆ ನೀಡುವಾಗ ಕಡಿತ ಮಾಡಿ ಅನ್ಯಾಯವೆಸಗಲಾಗಿದೆ. ಮುಂದಿನ ಚುನಾವಣೆಯಲ್ಲಿ ಇಂತಹ ಅನ್ಯಾಯ ಮರುಕಳಿಸಬಾರದು ಹಾಗೂ ಬಾಕಿ ಉಳಿಸಿರುವ ಬಾಡಿಗೆ ಹಣವನ್ನು ನೀಡಬೇಕೆಂದು ಆಗ್ರಹಿಸಿದರು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು ಸರಿಯಾದ ಸ್ಪಂದನೆ ಸಿಗದೇ ಇದ್ದಲ್ಲಿ ಚುನಾವಣೆಯ ದಿನದಂದು ನಾವು ವಾಹನಗಳನ್ನು ಇಟ್ಟು ಸಾಮೂಹಿಕ ಪ್ರತಿಭಟನೆ ಮಾಡಲಿದ್ದೇವೆ. ವಾಹನಕ್ಕೆ ಅಧಿಕೃತ ಬಾಡಿಗೆ ನಿಗದಿ ಪಡಿಸುವವರೆಗೆ ವಾಹನವನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಸಂಘಟನೆಯ ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಸುನೀಲ್ ಲೋಬೋ, ಮಹಮ್ಮದ್ ಇಕ್ಬಾಲ್, ವಿಠಲ ರೈ ಮದ್ವ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.