ಬಂಟ್ವಾಳ: ಸುಮಾರು 100 ವರ್ಷಗಳ ಹಿನ್ನೆಲೆ ಹೊಂದಿರುವ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಕಂಬಳ ಮಾ.16ರಂದು ನಡೆಯಲಿದ್ದು, ಇದೀಗ ಸಮರ್ಪಕ ಸ್ಥಳಾವಕಾಶ ಕೊರತೆ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಕೊಡಂಗೆ ಎಂಬಲ್ಲಿ ಸುಮಾರು ಐದು ಎಕರೆ ಸರ್ಕಾರಿ ಜಮೀನಿನಲ್ಲಿ ಶಾಶ್ವತ ಕರೆ’ ನಿರ್ಮಿಸಲು ಕಂಬಳ ಸಮಿತಿ ಮಹತ್ತರ ನಿರ್ಧಾರ ಕೈಗೊಂಡಿದೆ ಎಂದು ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಹೊಕ್ಕಾಡಿಗೋಳಿ ಕೊಡಂಗೆ ಎಂಬಲ್ಲಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳಕ್ಕೆ ಬುಧವಾರ ನಡೆದ ನೂತನ ‘ಶಾಶ್ವತ ಕರೆ ನಿರ್ಮಾಣ’ಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಶಾಶ್ವತ ಕರೆ ನಿರ್ಮಾಣ ಬಳಿಕ ಸ್ಥಳೀಯ ಓಟದ ಕೋಣಗಳಿಗೆ ಕುದಿ ಕಂಬಳ ನಡೆಸಲು ಸಹಕಾರಿಯಾಗಲಿದ್ದು, ಪ್ರೇಕ್ಷಕರಿಗೂ ಸುಸಜ್ಜಿತ ಮೂಲಭೂತ ಸೌಕರ್ಯ ಒದಗಿಸಲು ಸಹಕಾತಿಯಾಗಲಿದೆ ಎಂದರು.
ಸ್ಥಳೀಯ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಳದ ಕೃಷ್ಣಪ್ರಸಾದ್ ಅಸ್ರಣ್ಣ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಇಲ್ಲಿನ ಪೂಂಜ ಕ್ಷೇತ್ರ ಮತ್ತು ಮುಜಿಲ್ನಾಯ ದೈವಸ್ಥಾನಕ್ಕೆ ಕಂಬಳದ ಜೊತೆಗೆ ಧಾರ್ಮಿಕ ನಂಟು ಹೊಂದಿದೆ ಎಂದರು. ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಶ್ವತ ಕರೆ ನಿರ್ಮಾಣಕ್ಕೆ ದೇವರ ಒಪ್ಪಿಗೆ ಸಿಕ್ಕಿದೆ ಎಂದರು.
ದೇವಳದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಲೋಕೇಶ ಶೆಟ್ಟಿ, ಪ್ರಗತಿಪರ ಕೃಷಿಕ ಶ್ರೀನಿವಾಸ ಆಳ್ವ ಆಲಂಗಾರುಗುತ್ತು, ಕಂಬಳ ಸಮಿತಿ ನೂತನ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಶುಭ ಹಾರೈಸಿದರು.
ಇದೇ ವೇಳೆ ಹಿರಿಯ ಕಂಬಳ ಸಾಧಕ ಜಾನ್ ಸಿರಿಲ್ ಡಿಸೋಜ (ಅಪ್ಪು) ಸರಪಾಡಿ ಇವರಿಗೆ ಕರೆ ನಿರ್ಮಾಣದ ವೀಳ್ಯ ಹಸ್ತಾಂತರಿಸಲಾಯಿತು.
ಪ್ರಮುಖರಾದ ಡಾ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ವಸಂತ ಶೆಟ್ಟಿ ಕೇದಗೆ, ಸಂದೇಶ ಶೆಟ್ಟಿ ಪೊಡುಂಬ, ಸ್ಥಳದಾನಿ ಓಬಯ ಪೂಜಾರಿ, ಕೊರಗಪ್ಪ ಪೂಜಾರಿ, ಜನಾರ್ದನ ಬಂಗೇರ ತಿಮರಡ್ಡ, ಗೋಪಾಲ ಬಂಗೇರ, ಸುಧಾಕರ ಚೌಟ ಬಾವ, ಪುಷ್ಪರಾಜ ಶೆಟ್ಟಿ, ಬಾಬು ರಾಜೇಂದ್ರ ಶೆಟ್ಟಿ, ರಾಜೇಶ ಶೆಟ್ಟಿ ಸೀತಾಳ, ಕಾಂತಣ್ಣ ಶೆಟ್ಟಿ ಹೊಂಗರಹಿತ್ಲು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಹರೀಶ ಹಿಂಗಾಣಿ, ಸುರೇಶ ಶೆಟ್ಟಿ ಹಕ್ಕೇರಿ, ಉಮೇಶ ಹಿಂಗಾಣಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಶಿವಾನಂದ ರೈ, ಲೋಕನಾಥ ಶೆಟ್ಟಿ ಪಮ್ಜ, ಅಬ್ದುಲ್ ರಹಿಮಾನ್, ಉಮೇಶ ಶೆಟ್ಟಿ ಕೊನೆರೊಟ್ಟು, ನವೀನ ಪೂಜಾರಿ ಕುಂಜಾಡಿ, ರತ್ನಾಕರ ಶೆಟ್ಟಿ ಹೊಕ್ಕಾಡಿಗೋಳಿ ಮತ್ತಿತರರು ಇದ್ದರು.
ಕಂಬಳ ಸಮಿತಿ ಗೌರವಾಧ್ಯಕ್ಷ, ವಕೀಲ ಸುರೇಶ ಶೆಟ್ಟಿ ಸಿದ್ಧಕಟ್ಟೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಶಿಧರಶೆಟ್ಟಿ ಕಲ್ಲಾಪು ವಂದಿಸಿದರು.