ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸವವು ದಶಂಬರ್ 9 ರಂದು (ಶನಿವಾರ) ಸಂಜೆ ಹನುಮಾನ್ ನಗರದ ವಿಶಾಲ ಮೈದಾನದಲ್ಲಿ ನಿರಂತರ ಎರಡೂವರೆ ತಾಸುಗಳ ಕಾಲ ನಡೆಯಲಿದೆ ಎಂದು ಪುತ್ತೂರು ಶ್ರೀ ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು 40 ವಿಶೇಷ ಚೇತನ ಮಕ್ಜಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 3,500 ವಿದ್ಯಾರ್ಥಿಗಳು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್ಟಿಕ್ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ-ಏಕಚಕ್ರಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಸಾಮೂಹಿಕ ರಚನೆ ಸೇರಿದಂತೆ 20 ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸಂಜೆ ನಿಗದಿತ ಸಮಯ 6.15 ಕ್ಕೆ ಪ್ರದರ್ಶನ ಆರಂಭವಾಗಲಿದ್ದು ರಾತ್ರಿ ಸುಮಾರು 9 ಗಂಟೆ ಕಾರ್ಯಕ್ರಮ ಮುಕ್ತಾಯವಾಗಲಿದೆ. ಚಿತ್ರನಟ ಪ್ರಕಾಶ್ ಬೆಳವಾಡಿ,ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಬಸವನಗೌಡ ಯತ್ನಾಳ್ ,ವಿ.ಪ.ಸದಸ್ಯ ಬೋಜೇಗೌಡ,
ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಸಚಿವರು, ಉದ್ಯಮಿಗಳು ಸೇರಿದಂತೆ 100 ಕ್ಕು ಹೆಚ್ಚು ಗಣ್ಯರು ವಿಶೇಷ ಆಹ್ವಾನಿತರಾಗಿ ಅಗಮಿಸಲಿದ್ದಾರೆ. ಹಾಗೆಯೇ 15 ರಿಂದ 20 ಸಾವಿರ ಮಂದಿ ಮಕ್ಕಳ ಕ್ರೀಡೋತ್ಸವವನ್ನು ವೀಕ್ಷಿಸಲಿದ್ದಾರೆ ಎಂದರು