ಬಂಟ್ವಾಳ: ಬಿ.ಸಿ.ರೋಡಿನ ಹಳೆಯ ಉಪನೋಂದಾಣಿ ಕಚೇರಿ ಬಳಿ ಕಸದ ರಾಶಿ ತುಂಬಿಕೊಂಡಿದ್ದ ಮುರುಕಲು ಶೆಡ್ನಲ್ಲಿ ಕಳೆದ ಹಲವಾರು ದಿನಗಳಿಂದ ಊಟ, ತಿಂಡಿಯಿಲ್ಲದೆ ನಿರ್ಗತಿಕರಾಗಿ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಜೆಸಿಐ ಬಂಟ್ವಾಳ ಸಂಸ್ಥೆ ಉಪಚರಿಸಿ ಗುಂಡೂರಿಯ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದೆ.
ಕುಟುಂಬ ಬಂಧುಗಳಿಂದ ದೂರವಾಗಿ ಕಳೆದ ಹಲವು ದಿನಗಳಿಂದ ಬಿ.ಸಿ.ರೋಡಿನಲ್ಲಿಯೇ ಇದ್ದ ಉಳ್ಳಾಲ ತಾಲೂಕಿನ ಸಜೀಪಪಡು ಗ್ರಾಮದ ರಾಜೇಂದ್ರ ಮೂಲ್ಯ ಎಂಬವರು ಕಳೆದ ಕೆಲವು ದಿನಗಳಿಂದ ಊಟಕ್ಕಿಲ್ಲದೆ ನಿತ್ರಾಣರಾಗಿ ಬಿ.ಸಿ.ರೋಡಿನ ಮುರುಕಲು ಶೆಡ್ ನಲ್ಲಿಯೇ ಉಳಿದುಕೊಂಡಿದ್ದು, ಈ ಬಗ್ಗೆ ಭೂ ಅಭಿವೃದ್ದಿ ಬ್ಯಾಂಕಿನ ಸಿಬ್ಬಂದಿ ಯೋಗೀಶ್ ಅವರು ಜೆಸಿಐ ಬಂಟ್ವಾಳದ ಗಮನಕ್ಕೆ ತಂದಿದ್ದರು. ತಕ್ಷಣ ರಾಜೇಂದ್ರ ಅವರನ್ನು ಭೇಟಿ ಆದ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ, ಪೂರ್ವಾಧ್ಯಕ್ಷ ಸದಾನಂದ ಬಂಗೇರ, ನಿಕಪೂರ್ವಾಧ್ಯಕ್ಷ ರೋಷನ್ ರೈ, ಸದಸ್ಯರಾದ ನಾರಾಯಣ ಸಿ. ಪೆರ್ನೆ, ಕಿಶೋರ್ ಆಚಾರ್ಯ ಆಹಾರ, ನೀರು ನೀಡಿ ಉಪಚರಿಸಿದರು. ಬೆಳಗ್ಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟವನ್ನು ಯೋಗೀಶ್ ಅವರು ನೀಡಿದ್ದರು. ಬಳಿಕ ಗುಂಡೂರಿಯ ಶ್ರೀ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಅವರನ್ನು ಸಂಪರ್ಕಿಸಿ ಸೇವಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸಂಜೆಯ ವೇಳೆ ಅವರನ್ನು ಸೇವಾಶ್ರಮದಲ್ಲಿ ದಾಖಲಿಸಲಾಯಿತು.
ಹಲವು ದಿನಗಳಿಂದ ರಾಜೇಂದ್ರ ಅವರು ಊಟ, ಆಹಾರ ಇಲ್ಲದೆ ನಿತ್ರಾಣಗೊಂಡು ಪರತಪಿಸುತಿದ್ದಂತಹ ಸಂದರ್ಭದಲ್ಲಿ ಜೆಸಿಐ ಬಂಟ್ವಾಳ ಸದ್ದಿಲ್ಲದೆ ಅವರನ್ನು ಸೇವಾಶ್ರಮಕ್ಕೆ ದಾಖಲಿಸುವ ಮೂಲಕ ಸೇವಾ ಕಾರ್ಯವನ್ನು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಜೀವನದಲ್ಲಿ ನೊಂದ ಜೀವಕ್ಕೆ ಆಸರೆಯಾಗುವ ಮೂಲಕ ಗಾಂಧೀ ಜಯಂತಿಯನ್ನು ಜೆಸಿಐ ಬಂಟ್ವಾಳ ಅರ್ಥಪೂರ್ಣವಾಗಿ ಆಚರಿಸಿದೆ.