ಬಂಟ್ವಾಳ: ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಮಾತಾ ಚರ್ಚಿನಲ್ಲಿ ಕನ್ಯಾ ಮಾತೆಯ ಹುಟ್ಟುಹಬ್ಬದ ದಿನವನ್ನು ತೆನೆಹಬ್ಬವಾಗಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ, ಲೋರೆಟ್ಟೋ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೇಸನ್ ಮೋನಿಸ್ ಪ್ರಧಾನ ಧರ್ಮಗುರುಗಳಾಗಿ ಹಾಗೂ ವಂದನೀಯ ಪ್ರತಾಪ್ ನಾಯಕ್ ಬಲಿಪೂಜೆಯನ್ನು ಅರ್ಪಿಸಿದರು.
ಚರ್ಚ್ ಧರ್ಮಗುರುಗಳು ದೇವರ ವಾಕ್ಯದ ಸಂದೇಶದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ತ್ಯಾಗಮಯ ಜೀವನದ ಬಗ್ಗೆ ಅರ್ಥ ಪೂರ್ಣ ಪ್ರವಚನ ನೀಡಿದರು. ಪೂಜೆಯಲ್ಲಿ ಮಕ್ಕಳು, ಭಕ್ತಾದಿಗಳು ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡರು. ಕನ್ಯಾಮಾತೆಯ ಪಲ್ಲಕ್ಕಿಯನ್ನು ಲೊರೆಟ್ಟೋ ಜಂಕ್ಷನ್ ಬಳಿಯಿಂದ ಚಚರ್ಚವರೆಗೆ ಆಕರ್ಷಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕ್ರೈಸ್ತ ಬಂಧುಗಳು ಶಿಸ್ತು ಹಾಗೂ ಶ್ರದ್ದಾಭಕ್ತಿಯಿಂದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದಾರು.
ಕಳೆದ 9 ದಿನಗಳಿಂದ ನಡೆದ ಮಾತೆ ಮರಿಯಮ್ಮನವರ ನೋವೆನಾ ಪ್ರಾರ್ಥನೆಗೆ ಮಕ್ಕಳು ಹೂಗಳನ್ನು ಅರ್ಪಿಸಿದರು ಈ ಸಂದರ್ಭ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು . ವಿವಿಧ ಬಗೆಯ ಹೂಗಳನ್ನು ತಂದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಂಭ್ರಮಕ್ಕೆ ಸಹಕರಿಸಿದ ಎಲ್ಲರಿಗೂ ತೆನೆಯನ್ನು ನೀಡಿ ಗೌರವಿಸಲಾಯಿತು. ಬಲಿ ಪೂಜೆ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಉಪಹಾರ ಹಾಗೂ ಕಬ್ಬನ್ನು ನೀಡಲಾಯಿತು. ಮಾತೆ ಮರಿಯಮ್ಮನವರ ಪಲ್ಲಕ್ಕಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿ ಸಮಾರಂಭದ ನೇತೃತ್ವ ವಹಿಸಿತ್ತು. ಧರ್ಮಗುರುಗಳು ಸಮಾರಂಭಕ್ಕೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ, ವಂದಿಸಿದರು.