ಬಂಟ್ವಾಳ: ತಾಲೂಕಿನ ಗ್ರಾಮೀಣ ಪ್ರದೇಶವಾದ ಸಜೀಪಮೂಡ ಗ್ರಾಮದಲ್ಲಿ ಸ್ಥಾಪನೆಗೊಂಡ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಕನಿಷ್ಠ ಅವಧಿಯಲ್ಲಿಯೇ ಗರಿಷ್ಠ ಸಾಧನೆಯನ್ನು ಮಾಡಿಕೊಂಡು ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿಕೊಂಡು ಮುನ್ನಡೆಯುತ್ತಿದೆ. ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮುಂದಾಳತ್ವದಲ್ಲಿ, ಅನುಭವಿ ನಿರ್ದೇಶಕರ ಮಾರ್ಗದರ್ಶನದಲ್ಲಿ, ಕ್ರಿಯಾಶೀಲ ಸಿಬ್ಬಂದಿಗಳ ಸಹಕಾರದೊಂದಿಗೆ ಸಂಘ ಲಾಭದಾಯಕವಾಗಿ ಪ್ರಗತಿಯ ಹೆಜ್ಜೆ ಇಟಿದ್ದು ಸಂಘದ 12ನೇ ಕಂಬಳಬೆಟ್ಟು ಶಾಖೆ ಉದ್ಘಾಟನೆಗೆ ಸಜ್ಜುಗೊಂಡಿದೆ.
ಸೆ. 3 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ವಿಟ್ಲ ಸಮೀಪದ ಕಂಬಳಬೆಟ್ಟು ದರ್ಬಾರ್ ಕಾಂಪ್ಲೆಕ್ಸ್ನಲ್ಲಿ ಸಂಘದ ನೂತನ 12ನೇ ಶಾಖೆಯನ್ನು ಕಲ್ಬುರ್ಗಿಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠಾಧಿಪತಿ ಶ್ರೀ ಡಾ| ಪ್ರಣವಾನಂದ ರಾಮ್ ಸ್ವಾಮೀಜಿ ಉದ್ಘಾಟಿಸುವರು, ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ. ರಮಾನಾಥ ರೈ , ವಿಟ್ಲ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ಪುನೀತ್ ಮಡತ್ತಾರು ಹಾಗೂ , ಮಾಜಿ ಅಧ್ಯಕ್ಷ ಜಯಪ್ರಕಾಶ್ ನಾಯಕ್ ಎನ್ ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಎಚ್., ವಿಟ್ಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಕೆ.ಕೆ. , ದರ್ಬಾರ್ ಕಾಂಪ್ಲೆಕ್ಸ್ ಮಾಲಕ ಮೊಯಿದ್ದೀನ್ ಹಾಜಿ, ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಹರೀಶ್ ಪೂಜಾರಿ ಮರುವಾಳ, ಕುಂಡಡ್ಕ ಬಿಲ್ಲ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಎಸ್.ಕೆ. ಭಾಗವಹಿಸುವರು.
ಮೂರ್ತೆದಾರಿಕೆ ಮಾಡುವ ಕುಲ ಕಸುಬುದಾರರ ಶ್ರೇಯೋಭಿವೃದ್ಧಿ ಹಾಗೂ ಅವರ ಆರ್ಥಿಕ ಜೀವನ ಮಟ್ಟ ಸುಧಾರಿಸುವ ಸದುದ್ದೇಶದೊಂದಿಗೆ 1991ರಲ್ಲಿ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ ನಗರದ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ಪ್ರಾರಂಭಗೊಂಡ ಬ್ಯಾಂಕ್, 2005 ನವೆಂಬರ್ 18 ರಂದು ಬೊಳ್ಳಾಯಿಯಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಿತು. ಬಂಟ್ವಾಳ ತಾಲೂಕಿನ ಎಲ್ಲಾ ಭಾಗಗಳಲ್ಲಿರುವ ಮೂರ್ತೆದಾರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಹಂತ ಹಂತವಾಗಿ ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ ,ಕಾವಳಮುಡೂರು ಎನ್.ಸಿ.ರೋಡು, ಸಾಲೆತ್ತೂರು ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಠೇವಣಾತಿ ಸಾಲ, ಸ್ವಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಪಿಗ್ಮಿ ಮುಂಗಡ ಸಾಲವನ್ನು ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಠೇವಣಿಗೆ 0.5% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ, ಸಿದ್ದಕಟ್ಟೆ ಶಾಖೆಯಲ್ಲಿ ಇ- ಸ್ಟ್ಯಾಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.
ಸಂಘವು ಗುರುಶ್ರೀ ಎಂಬ ಹೆಸರಿನಲ್ಲಿ 170 ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ನೀಡುವ ಯೋಜನೆಯನ್ನು ಹೊಂದಿದೆ. ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಪ್ರಸ್ತುತ ಒಟ್ಟು 10585 ಸದಸ್ಯರನ್ನು ಹೊಂದಿ 1617571814.81 ರೂಪಾಯಿ ವ್ಯಾಪರ ವಹಿವಾಟನ್ನು ನಡೆಸಿದೆ. ಈ ವರ್ಷ 1722007.65 ರೂಪಾಯಿ ವಾರ್ಷಿಕ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.25ಡಿವಿಡೆಂಡ್ ನೀಡಲಾಗಿದೆ 255328133 ರೂಪಾಯಿ ಸಾಲ ನೀಡಿದ್ದು, 302450631.69 ರೂಪಾಯಿ ಠೇವಣಾತಿ ಇದೆ. 2313225 ಷೇರುಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಕಾರ್ಯವ್ಯಾಪ್ತಿಯಲ್ಲಿ ತೆರಯುವ ಯೋಜನೆಯನ್ನು ಸಂಘ ಹೊಂದಿದೆ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಿಂದ ಮೊದಲ್ಗೊಂಡು ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು ಮಹಿಳೆಯರ ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ನಮ್ಮ ಸಂಘ ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ನಮ್ಮ ಸಂಘದ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಸಜೀಪಮೂಡ ಗ್ರಾಮದ ಸುಭಾಷ್ನಗರದಲ್ಲಿ 0.50ಎಕ್ರೆ ಜಮೀನು ಖರೀದಿಸಲಾಗಿದ್ದು ಶೀಘ್ರ ಸ್ವಂತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಡಿ ಇಡಲಿದ್ದೇವೆ.
ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾಗಿ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಶ್ರೀಮತಿ ಕೆ. ಸುಜಾತ ಎಂ., ಶ್ರೀಮತಿ ವಾಣಿವಸಂತ, ಅರುಣ್ ಕುಮಾರ್ ಎಂ. ಆಶೀಶ್ ಪೂಜಾರಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಮಮತಾ ಜಿ. ಸಂಘವನ್ನು ಮುನ್ನಡೆಸುತ್ತಿದ್ದಾರೆ.