ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜಿಲ್ಲೆಯಲ್ಲಿ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ ದಡಿ ಈಗಾಗಲೇ 70 ಮಂದಿ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಸುಜ್ಞಾನ ನಿಧಿ ಕಾರ್ಯಕ್ರಮ ದಡಿ 411 ಮಂದಿ ವಿದ್ಯಾರ್ಥಿಗಳಿಗೆ ರೂ 20.52ಲಕ್ಷ ಶಿಷ್ಯ ವೇತನ ನೀಡಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು ೯೬ ಮಂದಿ ವಿದ್ಯಾರ್ಥಿಗಳಿಗೆ ರೂ 16.72 ಲಕ್ಷ ಶಿಷ್ಯ ವೇತನ ವಿತರಿಸಲಾಗುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದ್ದಾರೆ.
ಇಲ್ಲಿನ ಬಂಟ್ವಾಳ ಉನ್ನತಿ ಸೌಧ ಸಭಾಂಗಣದಲ್ಲಿ ಗುರುವಾರ ನಡೆದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮ ದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಯೋಚನೆಯಿಂದ ಸಮಾಜಮುಖಿ ಯೋಜನೆ ಮುನ್ನಡೆಯುತ್ತಿದೆ ಎಂದರು.
ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಶುಭ ಹಾರೈಸಿದರು.
ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕಿ ಅಮಿತಾ ವಂದಿಸಿ, ಮೇಲ್ವಿಚಾರಕ ಶಿವರಂಜನ್ ಕಾರ್ಯಕ್ರಮ ನಿರೂಪಿಸಿದರು.