ಬಂಟ್ವಾಳ: ಉಪಯೋಗದ ಬಳಿಕ ವ್ಯರ್ಥವಾಗಿ ಹೋಗುವ, ಉರುವಲಾಗಿ ಬಳಸಲ್ಪಡುವ ತೆಂಗಿನ ಗೆರಟೆ ಕಲಾವಿದನ ಕೈ ಚಳಕದಲ್ಲಿ ಸುಂದರ ಕಲಾಕೃತಿಗಳಾಗಿ ಮೂಡಿಬಂದಿದೆ. ತೆಂಗಿನ ಗೆರಟೆಯಿಂದ ಇಂತಹ ಕಲಾಕೃತಿಗಳನ್ನು ರಚಿಸಬಹುದೇ ಎಂದು ಅಚ್ಚರಿ ಪಡುವಂತೆ ಬಗೆಬಗೆಯ ಕಲಾಕೃತಿಗಳು ರಚನೆಯಾಗಿದೆ. ದಿನ ಬಳಕೆಯ ವಸ್ತುಗಳಾಗಿ, ಮನೆಯ ಅಂದ ಹೆಚ್ಚಿಸುವ ಕಲಾಕುಸಮಗಳಾಗಿ ತೆಂಗಿನ ಚಿಪ್ಪು ಆಕರ್ಷಕ ರೂಪ ಪಡೆದುಕೊಂಡಿದೆ.
ಇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಪನೆ ಎಂಬಲ್ಲಿನ ನಿವಾಸಿ ಸಚ್ಚೀಂದ್ರ ತೆಂಗಿನ ಗೆರಟೆಯಲ್ಲಿ ಕಲಾಕೃತಿಯನ್ನು ರಚಿಸುವ ಕಲಾವಿದ. ಇವರು ಮೂಲತಃ ಕಲಾಕಾರರಲ್ಲ. ಕಲಾವಿದರ ಕುಟುಂಬದ ಹಿನ್ನಲೆಯೂ ಇವರಿಗಿಲ್ಲ. ಕೋವಿಡ್ ಲಾಕ್ಡೌನ್ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದ ಸಂದರ್ಭ ತೆಂಗಿನ ಗೆರಟೆಯಲ್ಲಿ ಮಾಡಿದ್ದ ಚಹಾ ಕಪ್ ನೋಡಿ ಅದರಂತೆ ತಾನು ಮಾಡಬೇಕೆಂದು ಪ್ರಯತ್ನಿಸಿ ಯಶಸ್ಸು ಪಡೆದಾಗ ಇಂತಹ ಬಗೆಬಗೆಯ ಕಲಾಕೃತಿಗಳನ್ನು ರಚಿಸಲು ತೀರ್ಮಾನಿಸಿದರು. ಕಟ್ಟಡ ನಿರ್ಮಾಣದ ಮೇಸ್ತ್ರೀ ಕೆಲಸ ನಿರ್ವಹಿಸುವ ಸಚ್ಚೀಂದ್ರ ಅವರು ಬಳಿಕ ತನ್ನ ಬಿಡುವಿನ ವೇಳೆಯಲ್ಲಿ ವಿವಿಧ ಕಲಾಕೃತಿಗಳನ್ನು ರಚಿಸಲು ಆರಂಭಿಸಿದರು. ಇದೀಗ ದೀಪ, ತೂಗುದೀಪ, ತೆಂಗಿನ ಮರ, ಸ್ಕೂಟರ್, ದೊಡ್ಡ ಇರುವೆ, ಬೆಡ್ಲೈಟ್, ಅಮೃತ ಮಹೋತ್ಸವದ ಸವಿ ನೆನೆಪಿನ ಬಾವುಟ, ಸ್ಯಾನಿಟೈಸರ್ ಬಾಟಲ್, ತಿರುಗುವ ಫ್ಯಾನ್, ಹೂವಿನ ಕುಂಡ, ನೀರಿನ ಮಗ್, ಟೀಕಪ್, ವೈನ್ಕಪ್, ಗಣಪತಿ, ಘಂಟೆ ಮೊದಲಾದ ಹಲವಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಮೇಲ್ನೋಟಕ್ಕೆ ಮರದ ಕೆತ್ತನೆಯಂತೆ ಕಂಡು ಬಂದರೂ ಕೇವಲ ತೆಂಗಿನ ಗೆರಟೆ, ಗೆರಟೆಯ ಹುಡಿ, ಫ್ಲೆಕ್ಸ್ ಗಮ್ ಅನ್ನು ಮಾತ್ರ ಬಳಸಿ ಈ ಕಲಾಕೃತಿಗಳನ್ನು ರಚಿಸಿದ್ದಾರೆ.
ಸ್ವಕಲಿಕೆಯಲ್ಲಿ ಒಲಿದ ವಿದ್ಯೆ:
ಸಚ್ಚೀಂದ್ರ ಅವರಿಗೆ ಕರಗತವಾಗಿರುವ ಈ ವಿದ್ಯೆಗೆ ಗುರುಗಳಿಲ್ಲ. ಸ್ವ ಕಲಿಕೆಯಿಂದ ಒಲಿಸಿಕೊಂಡ ಕಲೆ ಇದಾಗಿದೆ. ತೆಂಗಿನ ಚಿಪ್ಪಿನಲ್ಲಿ ಕಲಾಕೃತಿ ರಚಿಸಲು ಸಾಧ್ಯ ಎನ್ನುವ ಮಾಹಿತಿ ಪಡೆದುಕೊಂಡು ಸ್ವಪ್ರಯತ್ನದಿಂದ ಆರಂಭಗೊಂಡ ಇವರ ಸಾಧನೆಯಿಂದ ಇಂದು ತೆಂಗಿನ ಗೆರಟೆಯಲ್ಲಿ ಹೊಸ ಹೊಸ ಕಲಾಕೃತಿಗಳನ್ನು ರಚಿಸಿದ್ದಾರೆ. ಮನೆಯ ಪಕ್ಕವೇ ಕಲಾಕೃತಿಗಳನ್ನು ರಚಿಸಿಲು ಸಣ್ಣ ಕುಟೀರವೊಂದನ್ನು ನಿರ್ಮಿಸಿ ಕೊಂಡು ಕೆಲಸದ ಬಿಡುವಿನ ವೇಳೆಯಲ್ಲಿ ಇಂತಹ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕಲಾಕೃತಿಗಳನ್ನು ರಚಿಸಲು ತಾಳ್ಮೆ ಹಾಗೂ ಸಮಯ ಅಗತ್ಯವಾಗಿದ್ದು ಕೆಲವೊಂದು ಕಲಾಕೃತಿಗಳನ್ನು ತಯಾರಿಸಲು ಅನೇಕ ದಿನಗಳನ್ನು ವ್ಯಯಿಸಬೇಕಾಗುತ್ತದೆ ಎನ್ನುತ್ತಾರೆ ಸಚ್ಚೀಂದ್ರ. ಪತ್ನಿ ಜಯಲಕ್ಷ್ಮೀ ಇವರ ಕಲಾಸೇವೆಗೆ ಸಹಕಾರ ನೀಡುತ್ತಿದ್ದಾರೆ.
೫.೪ ಅಡಿ ಎತ್ತರದ ದೀಪ:
ಕೇವಲ ತೆಂಗಿನ ಗೆರಟೆಯನ್ನು ಬಳಸಿಕೊಂಡು ೫.೪ ಅಡಿ ಎತ್ತರದ ಆಕರ್ಷಕ ದೀಪವೊಂದನ್ನು ಇವರು ರಚಿಸಿದ್ದಾರೆ. ನೈಜತೆಯ ಪ್ರತಿರೂಪದಂತಿರುವ ಈ ದೀಪ ಮನೆಗೆ ಭೇಟಿ ನೀಡುವ ಎಲ್ಲರ ಗಮನವನ್ನು ಸೆಳೆಯುತ್ತದೆ. ತೆಂಗಿನ ಗೆರಟೆಯಲ್ಲಿ ಇಂತಹ ಕಲಾಕೃತಿ ರಚಿಸಲು ಸಾಧ್ಯವೇ? ಎಂದು ಅಚ್ಚರಿ ಮೂಡಿಸುವಂತಿದೆ.
ಪ್ರೋತ್ಸಾಹದ ಕೊರತೆ:
ಮೂಲತ: ಕಲಾವಿದನಲ್ಲದಿದ್ದರೂ ಹವ್ಯಾಸದೊಂದಿಗೆ ಆರಂಭವಾದ ಕಲಾಕೃತಿ ರಚನೆಯ ಕಾಯಕ ಇಂದು ಸಚ್ಚೀಂದ್ರ ಅವರೊಳಗೆ ಅವ್ಯಕ್ತವಾಗಿದ್ದ ಅಪರೂಪದ ಕಲಾವಿದನನ್ನು ಅನಾವರಣಗೊಳಿಸಿದೆ. ಅಪೂರ್ವ ಹವ್ಯಾಸವನ್ನು ತನ್ನ ವೃತ್ತಿಯನ್ನಾಗಿ ಸ್ವೀಕರಿಸಿ ಅನೇಕರಿಗೆ ಉದ್ಯೋಗ ನೀಡಬೇಕೆನ್ನುವ ಮಹಾದಾಸೆ ಇವರಿಗಿದ್ದರೂ ಪ್ರೋತ್ಸಾಹದ ಕೊರತೆಯಿಂದಾಗಿ ಅದು ಕೈಗೂಡಿಲ್ಲ. ಗ್ರಾಮೀಣ ಭಾಗದ ಅಪರೂಪದ ಕಲಾವಿದನ ಕಲಾ ಪ್ರೀತಿಗೆ ಕಲಾಭಿಮಾನಿಗಳ ಸಹಕಾರ ಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಸಚ್ಚೀಂದ್ರ ಅವರ ದೂರವಾಣಿ ಸಂಖ್ಯೆ 8310323408
ಸಂಪರ್ಕಿಸಬಹುದು.