ಬಂಟ್ವಾಳ: ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ಉದ್ಘಾಟನಾ ಸಮಾರಂಭ ಮಂಗಳವಾರ ಸಂಜೆ ಲೊರೆಟ್ಟೋ ಪದವಿನಲ್ಲಿರುವ ಲೊರೆಟ್ಟೋ ಮಾತಾ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ರಾಜಗೋಪಾಲ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕ್ಯಾಟರಿಂಗ್ ವೃತ್ತಿನಿರತರು ಸಂಘಟಿತರಾದಾಗ ಕಷ್ಟ ಸಂದರ್ಭವನ್ನು ಎದರಿಸಲು ಸಾಧ್ಯವಿದೆ ಎಂದು ತಿಳಿಸಿದರು. ನಾಲ್ಕು ವರ್ಷದ ಹಿಂದೆ ಜಿಲ್ಲಾ ಸಂಘ ಆರಂಭಗೊಂಡಿತ್ತು, ಇದೀಗ ಮೊದಲ ವಲಯವಾಗಿ ಬಂಟ್ವಾಳ ವಲಯ ಉದ್ಘಾಟನೆಗೊಂಡಿರುವುದು ಅಭಿನಂದನೀಯ, ವಲಯದ ಸ್ಥಾಪನೆಗೆ ಕ್ಯಾಟರಿಂಗ್ ಮಾಲಕರು ಹಲವು ತಿಂಗಳಿನಿಂದ ಪರಿಶ್ರಮ ಪಡುತ್ತಿದ್ದು ಇದೊಂದು ಬಲಿಷ್ಠ ಸಂಘಟನೆಯಾಗಿ ಮೂಡಿ ಬರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಅಡುಗೆ ಕೆಲಸ ಸುಲಭವಾಗಬೇಕು ಎನ್ನುವ ಉದ್ದೇದಿಂದ ಕ್ಯಾಟರಿಂಗ್ ಉದ್ಯಮ ಅಸ್ಥಿತ್ವಕ್ಕೆ ಬಂತು. ಈಗ ಪ್ರತಿಯೊಂದು ಕಾರ್ಯಕ್ರಮಕ್ಕೂ ಕ್ಯಾಟರಿಂಗ್ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಊಟೋಪಚಾರ ಚೆನ್ನಾಗಿದ್ದರೆ ಕಾರ್ಯಕ್ರಮ ಚೆನ್ನಾಗಿತ್ತೆಂದು ಹೇಳುತ್ತಾರೆ, ಊಟೋಪಚಾರದಲ್ಲಿ ಸ್ವಲ್ಪ ಎಡವಿದರೂ ಟೀಕೆಗಳನ್ನು ಕೇಳಬೇಕಾಗುತ್ತದೆ. ಆದ್ದರಿಂದ ಕ್ಯಾಟರಿಂಗ್ ಉದ್ಯಮ ಅತ್ಯಂತ ನಾಜೂಕಿನ ಕೆಲಸ ಎಂದು ತಿಳಿಸಿದರು.
ಲೊರೆಟ್ಟೋ ಮಾತಾ ಚರ್ಚಿನ ಧರ್ಮಗುರು ವಂ. ಫ್ರಾನ್ಸಿಸ್ ಕ್ರಾಸ್ತ ಆಶೀರ್ವಚನ ನೀಡಿ ಯಾವುದೇ ಕಾರ್ಯಕ್ರಮವನ್ನು ಸುಧಾರಿಸಿ ಕೊಡುವ ದೊಡ್ಡ ಜವಾಬ್ದಾರಿ ಕ್ಯಾಟರಿಂಗ್ನವರಿಗಿರುತ್ತದೆ. ಭೋಜನ ಉತ್ತಮವಾಗಿದ್ದರೆ ಕಾರ್ಯಕ್ರಮ ಉತ್ತಮವಾಗಿತ್ತು ಎನ್ನುವಂತೆ ಜನರು ಹೇಳುವಲ್ಲಿ ಕ್ಯಾಟರಿಂಗ್ನವರ ಪಾತ್ರ ಮಹತ್ತರವಾದುದು ಎಂದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಶುಭ ಮಾತನಾಡಿದರು. ಜಿಲ್ಲಾ ಗೌರವಾಧ್ಯಕ್ಷರಾದ ಸುಧಾಕರ ಕಾಮತ್, ಫೆಲಿಕ್ಸ್ ವೆವೆಲ್ ಲಸ್ರಾದೋ, ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ಜೊಸ್ಸಿ ಸಿಕ್ವೇರಾ, ಕೋಶಾಧಿಕಾರಿ ರಾಜೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ನಾರಾಯಣ ಸುವರ್ಣ, ಉಪಾಧ್ಯಕ್ಷರಾಗಿ ಸದಾನಂದ ಬಿ.ಬಂಗೇರ, ಹೆರಾಲ್ಡ್ ರೋಡ್ರಿಗಸ್, ಕಾರ್ಯದರ್ಶಿಯಾಗಿ ಪ್ರಕಾಶ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಆಂಟನಿ ಸಿಕ್ವೇರಾ, ಕೋಶಾಧಿಕಾರಿಯಾಗಿ ರೋಶನ್ ಡಿಸೋಜಾ, ಜೊತೆಕಾರ್ಯದರ್ಶಿಯಾಗಿ ವಾಮನ ಬಂಗೇರ, ರೋಷನ್ ಪಿಂಟೋ ಜಿಲ್ಲಾಧ್ಯಕ್ಷರಿಂದ ಅಧಿಕಾರ ಸ್ವೀಕರಿಸಿದರು. ಸದಸ್ಯರಿಗೆ ಪ್ರಮಾಣಪತ್ರ ನೀಡಿ ವಲಯಕ್ಕೆ ಸೇರಿಸಿಕೊಳ್ಳಲಾಯಿತು.
ಅಗ್ನಿ ಅವಘಡಕ್ಕೆ ತುತ್ತಾಗಿ ನಷ್ಟ ಅನುಭವಿಸಿದ ಕಲ್ಯಾಣಿ ಕ್ಯಾಟರಿಂಗ್ನ ಮಾಲಕ ಲೋಕೇಶ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಸಂಘಟನಾ ಕಾರ್ಯದರ್ಶಿ ಆಂಟನಿ ಸಿಕ್ವೇರಾ ಸ್ವಾಗತಿಸಿದರು. ಉಪಾಧ್ಯಕ್ಷ ಸದಾನಂದ ಬಿ.ಬಂಗೇರ ಸದಸ್ಯರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವಂದಿಸಿದರು, ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.