ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಧವಸ ಧಾನ್ಯ ವಿತರಣ ಕಾರ್ಯಕ್ರಮ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಬೆಂಗಳೂರಿನ ಉದ್ಯಮಿ ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಆಹಾರದ ಕಿಟ್ ವಿತರಿಸಿ ಮಾತನಾಡಿ ರೋಗ ಬಂದ ಕೂಡಲೇ ತಕ್ಷಣ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡಬೇಕು ಆಗ ರೋಗ ಗುಣಮುಖವಾಗಲು ಸಾಧ್ಯವಿದೆ. ಕ್ಷಯರೋಗಿಗಳು ರೋಗ ಗುಣಮುಖವಾಗಲು ಔಷಧಿಯೊಂದಿಗೆ ಸೂಕ್ತ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದರು. ಸೇವಾಂಜಲಿ ಸಂಸ್ಥೆ ನಿರಂತರವಾಗಿ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು ಕೃಷ್ಣ ಕುಮಾರ್ ಪೂಂಜ ಅವರು ಅರ್ಹರಿಗೆ ಇದನ್ನು ತಲುಪಿಸುತ್ತಿದ್ದಾರೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಸದಸ್ಯ ಬಸ್ತಿ ಮಾಧವ ಶೆಣೈ ಶುಭಹಾರೈಸಿದರು. ವೇದಿಕೆಯಲ್ಲಿ ಉದ್ಯಮಿ ಸಂತೋಷ್ ಹೆಗ್ಡೆ ಬೆಂಗಳೂರು, ಸುರೇಶ್ ರೈ ಪೆಲಪಾಡಿ, ಎಂ.ಕೆ. ಖಾದರ್, ಡಾ ಧನುಷ್ ಕೋಟ್ಯಾನ್ ಮೇರಮಜಲು, ಬಿ. ನಾರಾಯಣ ಮೇರಮಜಲು, ಸುಕುಮಾರ್ ಅರ್ಕುಳ, ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ಪ್ರಕಾಶ್ ಕಿದೆಬೆಟ್ಟು, ಬಸವರಾಜು ಹಾವೇರಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ತಾರನಾಥ ಕೊಟ್ಟಾರಿ ತೇವು ವಂದಿಸಿದರು.