ಬಂಟ್ವಾಳ: ಕರಾವಳಿ ಭಾಗದಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕೊಯ್ಲು ಆದ ಬಳಿಕ ಅಡಿಕೆಯನ್ನು ಒಣಗಿಸುವುದು ಹಾಗೂ ಒಣ ಅಡಿಕೆಯನ್ನು ಸುಲಿಯುವುದು ಹಾಗೂ ಆಯುವುದು ತ್ರಾಸದ ಕೆಲಸವಾಗುತ್ತಿದೆ. ಕಾರ್ಮಿಕರ ಕೊರತೆಯಿಂದಾಗಿ ಒಣ ಅಡಿಕೆಯನ್ನು ಸಂಸ್ಕರಿಸಲು ಅನೇಕ ಅಡಿಕೆ ಬೆಳೆಗಾರರು ಪರದಾಡುತ್ತಿರುತ್ತಾರೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಬಂಟ್ವಾಳ ತಾಲೂಕಿನ ವಗ್ಗ ಬಳಿಯ ಬಾಂಬಿಲದ ಕುಕ್ಕರೋಡಿ ಎಂಬಲ್ಲಿ ಒಣ ಅಡಿಕೆಯ ಸಂಸ್ಕರಣ ಘಟಕವಾಗಿರುವ ‘ಕಲ್ಪತರು ಅಡಿಕೆ ಮಿಲ್’ ಕಾರ್ಯರಂಭಗೊಂಡಿದೆ.
ಸ್ಥಳೀಯ ನಿವಾಸಿ ರಮೇಶ್ ಪೂವಪ್ಪ ಕಲ್ಪತರು ಅಡಿಕೆ ಮಿಲ್ನ ನಿರ್ಮಾತೃ. ಕೆಲ ಸಮಯ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ರಮೇಶ್ ಪೂವಪ್ಪ ಬಳಿಕ ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಿಯಾಗಿದ್ದರು. ಇತ್ತೀಚೆಗೆ ಊರಿಗೆ ಮರಳಿದ ಇವರು ಏನಾದರೂ ಉದ್ಯಮವನ್ನು ಕೈಗೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ ಇವರಿಗೆ ಹೊಳೆದದ್ದು ಯಾಂತ್ರೀಕೃತ ಒಣ ಅಡಿಕೆ ಸಂಸ್ಕರಣ ಘಟಕ. ಮೂಲತಃ ಕೃಷಿಕರೇ ಆಗಿದ್ದ ರಮೇಶ್ ಅವರು ಅಡಿಕೆಯಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಇರುವುದುನ್ನು ಅರಿತು ತನ್ನ ಕನಸಿನ ಯೋಜನೆಯಾಗಿ ಈ ಘಟಕವನ್ನು ತೆರೆದಿದ್ದಾರೆ. ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆಡಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಬಾಂಬಿಲದ ಕುಕ್ಕೆರೋಡಿಯಲ್ಲಿ ಒಣ ಅಡಿಕೆ ಸಂಸ್ಕರಣ ಘಟಕವನ್ನು ಕಳೆದ ಪೆಭ್ರವರಿ ತಿಂಗಳಿನಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಿದ್ದಾರೆ.
ಒಣ ಅಡಿಕೆಗಳನ್ನು ಸುಲಿದು, ಬೇರ್ಪಡಿಸಿ ಗ್ರಾಹಕರಿಗೆ ನೀಡುತ್ತಾರೆ. ಇಲ್ಲಿ ಸುಲಿದ ಅಡಿಕೆಗಳನ್ನು ಮತ್ತೆ ಆಯ್ದು, ಪ್ರತ್ಯೇಕಿಸುವ ಅಗತ್ಯತೆ ಇಲ್ಲದೆ ಇರುವುದರಿಂದ ಬೆಳೆಗಾರರು ಇಲ್ಲಿಂದ ನೇರವಾಗಿ ಮಾರುಕಟ್ಟೆಗೆ ಒಯ್ಯಬಹುದಾಗಿದೆ. ಅಥವಾ ಇಲ್ಲಿಯೇ ಮಾರಾಟವನ್ನು ಮಾಡಬಹುದಾಗಿದೆ. ಅಡಿಕೆ ಸುಲಿಯಲು ಹಾಗೂ ಆಯಲು ಇದೊಂದು ಸುಸಜ್ಜಿತ ವ್ಯವಸ್ಥೆ ಆಗಿದ್ದು ದಕ. ಉಡುಪಿ ಜಿಲ್ಲೆಯಲ್ಲಿ ಇಂತಹ ಸುಸಜ್ಜಿತ ಹಾಗೂ ಪೂರ್ಣಪ್ರಮಾಣದ ಘಟಕ ಆರಂಭಗೊಂಡಿರುವುದು ಇದೇ ಮೊದಲು ಎನ್ನುತ್ತಾರೆ ರಮೇಶ್ ಪೂವಪ್ಪ. ಅಂಗಳದಿಂದ – ಅಂಗಡಿಗೆ ಎನ್ನುವ ಪರಿಕಲ್ಪನೆಯಡಿ ಆರಂಭಗೊಂಡ ಈ ಘಟಕ ಇದೀಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹೊಸ ಉದ್ಯಮ ಆರಂಭಿಸುವ ಮೂಲಕ ಸ್ಥಳೀಯ ಮಹಿಳೆಯರಿಗೂ ಉದ್ಯೋಗದ ಅವಕಾಶವನ್ನು ನೀಡಿದ್ದಾರೆ.
ಇನ್ನಷ್ಟು ಹೊಸ ತಂತ್ರಜ್ಞಾನದೊಂದಿಗೆ ಉದ್ಯಮವನ್ನು ವಿಸ್ತರಿಸುವ ಯೋಜನೆ ರಮೇಶ್ ಪೂವಪ್ಪ ಅವರದ್ದು. ಅಡಿಕೆ ಬೆಳೆಗಾರರು ಯಾಂತ್ರೀಕೃತ ವಿಧಾನದಲ್ಲಿ ಅತ್ಯಂತ ಸುಲಭವಾಗಿ ಅಡಿಕೆ ಸುಲಿಯಲು ಹಾಗೂ ಆಯಲು ರಮೇಶ್ ಪೂವಪ್ಪ ಅವರ ಕಲ್ಪತರು ಅಡಿಕೆ ಮಿಲ್ಗೆ ಭೇಟಿ ನೀಡಬಹುದು. ಅಥವಾ ದೂರುವಾಣಿ ಸಂಖ್ಯೆ 8971177006
ಅಥವಾ 9606371947
ಸಂಪರ್ಕಿಸಬಹುದಾಗಿದೆ.