ಬಂಟ್ವಾಳ: ಅಕ್ರಮ ಮರಳುದಂಧೆಕೋರರ ಹಣ ಈ ಚುನಾವಣೆಯಲ್ಲಿ ನನ್ನ ಸೋಲಿಗೆ ಹೆಚ್ಚಿನ ಪ್ರಭಾವ ಬೀರಿದೆ, ನಾನು ಗೆದ್ದಲ್ಲಿ ಬಿಜೆಪಿವರಿಗೆ ಅಕ್ರಮ ಮರಳುಗಾರಿಕೆ ಕಡಿವಾಣ ಬೀಳುತ್ತದೆ ಎನ್ನುವ ಭಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮರಳು ಮಾಫಿಯದವರು ಹಣ ಹಂಚಿದ್ದಾರೆ, ಹಣ ಬಲದ ಎದುರು ನನಗೆ ಸೋಲಾಯಿತು ಎಂದು ಮಾಜಿ ಸಚಿವ ಬಿ. ರಮನಾಥ ರೈ ಅಳಲು ತೋಡಿಕೊಂಡಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬಂಟ್ವಾಳ ಶಾಸಕರು ಕೃಷಿಕ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ದೊಡ್ಡ ವ್ಯಾಪಾರಿಗಳಾಗಿದ್ದು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ. ಸಿಮೆಂಟ್ ಉತ್ಪಾದನೆಗೆ ಬಾಕ್ಸೈಟ್ ನ್ನು ಸರಬರಾಜು ಮಾಡುವ ವ್ಯವಹಾರ ಅವರಿಗಿದೆ. ಕೃಷಿ ಹಾಗೂ ಸಮಾಜಸೇವೆ ನನ್ನ ಉದ್ಯೋಗ. ನಾನು ಎಲ್ಲಿಂದಲೋ ಬಂದು ಚುನಾವಣೆಗೆ ನಿಂತಿಲ್ಲ ಎಂದು ತಿಳಿಸಿದರು. ನಾನು ಚುನಾವಣಾ ರಾಜಕೀಯಕ್ಕೆ ಮಾತ್ರ ನಿವೃತ್ತಿ ಘೋಷಿಸಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ನಾಯಕರು ನೀಡುವ ಎಲ್ಲಾ ಜವಬ್ದಾರಿಗಳನ್ನು ನಿಭಾಯಿಸುತ್ತೇನೆ,
ಮುಂದಿನ 2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಅವರು ತಿಳಿಸಿದರು. ನನಗೆ ವಯಸ್ಸಾಗಿದೆ ಎಂದು ಅಪಪ್ರಚಾರ ಮಾಡಿ ನನ್ನನ್ನು ಸೋಲಿಸಲಾಗಿದೆ. ನನ್ನ ಪಕ್ಷದರಿಂದಲೂ ಕೂಡ ದುರುದ್ದೇಶಪೂರ್ವಕ ಅಪಪ್ರಚಾರಗಳು ನಡೆದಿದೆ ಎಂದು ಖೇದ ವ್ಯಕ್ತಪಡಿಸಿದ ಅವರು
ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಯಾವುದೇ ತಪ್ಪು ಮಾಡದೆ, ಕಳಂಕ ರಹಿತವಾಗಿ ಬದುಕಿದ್ದೇನೆ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ ಕಡಿಮೆ ಅಂತರದಲ್ಲಿ ಸೋಲಾಗಿದೆ, ಸೋಲನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಮತ್ತೆ ಕಾಂಗ್ರೆಸನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಆಯ್ಕೆಯಾಗಿದ್ದು ಅವರಿಗೆ ಬಂಟ್ವಾಳ ಕ್ಷೇತ್ರದ ಸಮಸ್ತ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬಿಜೆಪಿ ವಚನ ಭ್ರಷ್ಟ ಪಾರ್ಟಿಯಾಗಿದ್ದು, ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ ಅವರು ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ನೀಡಿರುವ ಎಲ್ಲಾ ಭರವಸೆಗಳು ಈಡೇರಲಿದೆ ಎಂದರು. ಬಂಟ್ವಾಳ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಅನೇಕ ಕನಸುಗಳಿದ್ದು, ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ತಿ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಾನು ರಾಜಕೀಯ ನಿವೃತ್ತಿ ಆಗುವುದಿಲ್ಲ, ರಾಜಕೀಯವೇ ನನ್ನ ಜೀವನ, ವ್ಯಾಪಾರ ಇಲ್ಲದೆ ಸಾಮಾಜಿಕ ಜೀವನ ಮಾಡಿಕೊಂಡು ಬಂದಿದ್ದೇನೆ, ಪಕ್ಷದ ಹೈಕಮಾಂಡ್ ಏನು ಜವಬ್ದಾರಿ ನೀಡುತ್ತದೆ ಅದನ್ನು ಚಾಚೂ ತಪ್ಪದೆ ನಿಷ್ಠೆಯಿಂದ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ಕಮೀಷನ್ ವ್ಯವಹಾರದಲ್ಲಿ ನಾನು ತೊಡಗಿಲ್ಲ ಆದರೆ ಉಳಿದ ಶಾಸಕರು ಎಷ್ಟು ಕಮೀಷನ್ ಪಡೆದುಕೊಂಡಿದ್ದಾರೆ ಎಂಬುದು ಚರ್ಚೆಯಾಗಬೇಕಿದೆ. ಇಷ್ಟು ವರ್ಷದ ರಾಜಕಾರಣದಲ್ಲಿ ಶುಧ್ದ ಹಸ್ತದ ರಾಜಕೀಯ ಮಾಡಿದ್ದೇನೆ, ಕ್ಷೇತ್ರದ ಜನತೆಗೆ ಗೌರವ ತರುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮಹಮ್ಮದ್, ಪದ್ಮಶೇಖರ್ ಜೈನ್, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಅಬ್ಬಾಸ್ ಆಲಿ, ಸುದರ್ಶನ ಜೈನ್, ಮಾಯಿಲಪ್ಪ ಸಾಲ್ಯಾನ್, ಸುರೇಶ್ ಜೋರಾ, ಇಬ್ರಾಹಿಂ ನವಾಜ್ ಬಡಕಬೈಲು, ಸದಾಶಿವ ಬಂಗೇರ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬಿ.ಮೋಹನ್, ಜಗದೀಶ್ ಕೊಯಿಲ, ಮತ್ತಿತರರು ಉಪಸ್ಥಿತರಿದ್ದರು