ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಹರಿಯುವ ನೇತ್ರಾವತಿ ನದಿಯಲ್ಲಿನ ಬಂಡೆಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆಗಳು ಕಾಣಿಸಲಾರಂಭಿಸಿದೆ. ಮಳೆಯಿಲ್ಲದೆ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಬಂಡೆ ಕಲ್ಲುಗಳ ಮೇಲೆ ಶಿವ, ನಂದಿ, ಪಾದ, ಪಾಣಿಪೀಠ, ಚೆನ್ನೆಮಣೆ, ಊಟದ ಬಟ್ಟಲು, ಜಡೆ, ಸೂರ್ಯ ಚಂದ್ರ, ತಾವರೆ ಮೊದಲಾದ ಅನೇಕ ಕೆತ್ತನೆಗಳು ಗೋಚರಿಸಿದೆ.
ಅನಾದಿಕಾಲದಿಂದಲೂ ಈ ಕೆತ್ತನೆಗಳು ಇದ್ದು ನಾವು ಸಣ್ಣವರಾಗಿದ್ದಾಗ ಇಲ್ಲಿ ಬಂದು ಆಟವಾಡುತ್ತಿದ್ದೇವು. ಇಲ್ಲಿರುವ ಪಾದವನ್ನು ಸೀತೆಯ ಪಾದವೆಂದು ಹಿರಿಯರು ಕರೆಯತಿದ್ದರು ಎಂದು ಸ್ಥಳೀಯರಾದ ಬಂಟ್ವಾಳ ಪುರಸಭೆಯ ಹಿರಿಯ ಸದಸ್ಯ ಗೋವಿಂದ ಪ್ರಭು ತಿಳಿಸಿದ್ದಾರೆ. ಇಲ್ಲಿರುವ ಕೆತ್ತನೆಗಳ ಬಗ್ಗೆ ಸ್ಪಷ್ಟವಾದ ಐತಿಹಾಸಿಕ ದಾಖಲೆಗಳು ಇಲ್ಲದೇ ಇದ್ದರೂ ಕೂಡ ಋಷಿಮುನಿಗಳು ಇಲ್ಲಿ ತಪ್ಪಸ್ಸನ್ನಾಚರಿಸುವ ಸಂದರ್ಭದಲ್ಲಿ ಇಂತಹ ಕೆತ್ತನೆಗಳನ್ನು ಮಾಡಿ ದೇವರನ್ನು ಆರಾಧಿಸುತ್ತಿದ್ದರು ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ. ನದಿಯಲ್ಲಿ ನೀರಿನ ಮಟ್ಟ ತೀವ್ರ ಕಡಿಮೆಯಾದಾಗ ಈ ಕೆತ್ತನೆಗಳು ಜನರಿಗೆ ಕಾಣಿಸುತ್ತವೆ. ಉಳಿದ ಸಂದರ್ಭದಲ್ಲಿ ನೀರಲ್ಲಿ ಮುಳುಗಡೆಯಾಗಿರುತ್ತದೆ. ಇತಿಹಾಸ ತಜ್ಞರು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳು ತಿಳಿದು ಬರಬಹುದಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯಲ್ಲಿ ನದಿಯಲ್ಲಿ ಬಂಡೆಗಳು ತುಂಬಿಕೊಂಡಿದ್ದು ನೀರಿನ ಹರಿವಿಗೆ ಈ ಕಲ್ಲುಗಳು ಒಂದೊಂದು ಆಕಾರವನ್ನು ಪಡೆದಿದ್ದು ನೀರಿಲ್ಲದೆ ಬರಡಾಗಿರುವ ನದಿಯಲ್ಲಿ ಶಿಲೆಯಲ್ಲರಳಿದ ಕಲೆಗಳಂತೆ ಬಂಡೆಗಳು ಕಂಡು ಬರುತ್ತಿದೆ.
—