ಬಂಟ್ವಾಳ: ಚುನಾವಣಾ ಆಯೋಗ, ದ.ಕ. ಜಿಲ್ಲಾ ಸ್ವೀಪ್ ಸಮಿತಿ ಇದರ ಆಶ್ರಯದಲ್ಲಿ ತಾಲೂಕು ಆಡಳಿತ ಬಂಟ್ವಾಳ, ತಾಲೂಕು ಕಚೇರಿ ಬಂಟ್ವಾಳ, ಪುರಸಭೆ ಬಂಟ್ವಾಳ, ಕಾರ್ಮೆಲ್ ಕಾಲೇಜು ಮೊಡಂಕಾಪು ಇದರ ಸಹಯೋಗದಲ್ಲಿ ಮತದಾನ ಜಾಗೃತಿ ಜಾಥಕ್ಕೆ ಬಿ.ಸಿ.ರೋಡಿ ಕೈಕಂಬದ ಪೊಳಲಿ ದ್ವಾರದ ಬಳಿ ಚಾಲನೆ ನೀಡಲಾಯಿತು.
ಜಾಗೃತಿ ಜಾಥವನ್ನು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಉದ್ಘಾಟಿಸಿದರು. ಅವರು ಮಾತನಾಡಿ ನನ್ನ ಒಂದು ಮತದಾನದಿಂದ ಏನು ಆಗುವುದಿಲ್ಲ ಎನ್ನುವ ಮನೋಭಾವ ಬಿಟ್ಟು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ನಮ್ಮ ನಡೆ ಮತದಾನದ ಕಡೆ ಎನ್ನುವ ದಿನಾಚರಣೆಯನ್ನು ಕರ್ನಾಟಕ ರಾಜ್ಯದ್ಯಂತ ಆಚರಿಸಲಿದ್ದೇವೆ, ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕೇಂದ್ರಗಳಲ್ಲಿ ಕುಳಿತು ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಿದ್ದಾರೆ. ವಿಶೇಷವಾಗಿ ಕಲಾವಿದರ ಮೂಲಕ ಜನರ ಮನಸ್ಸನ್ನು ಸೆಳೆಯುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಅಭಿದ್ ಗದ್ಯಾಲ್ ಮಾತನಾಡಿದರು.
ಗ್ರೇಡ್ 2 ತಹಶೀಲ್ದಾರ್ ದಯಾನಂದ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಸಿಡಿಪಿಓ ಗಾಯತ್ರಿ ಕಂಬಳಿ, ಕಾರ್ಮಿಕ ಅಧಿಕಾರಿ ಮರ್ಲಿನ್ ಡಿಸೋಜಾ, ದ.ಕ. ಜಿ.ಪಂ. ಇಂಜಿನಿಯರ್ಗಳಾದ ಕೃಷ್ಣ ಮಾನಪ್ಪ, ಜಗದೀಶ್, ನೋಣ್ಣಯ್ಯ ನಾಯ್ಕ್ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಯಕ್ಷಗಾನದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಬಳಿಕ ಕೈಕಂಬದಿಂದ ಬಿ.ಸಿ.ರೋಡಿನವರೆಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಜಾಗೃತಿ ಜಾಥಾ ನಡೆಯಿತು. ಬಿ.ಸಿ.ರೋಡು ಬಸ್ಸು ನಿಲ್ದಾಣದಲ್ಲಿ ಜಾಗೃತಿ ನಾಟಕದ ಮೂಲಕ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.