ಬಂಟ್ವಾಳ: ಕ್ಷೇತ್ರದ ಜನರ ಪ್ರತಿಯೊಂದು ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವುದರ ಜೊತೆಗೆ ಸರಕಾರದಿಂದ ಸಿಗುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಬದ್ಧತೆಯಿಂದ ಮಾಡಿದ್ದು, ಶಾಂತಿ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅಧ್ಯತೆ ನೀಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಅನಂತಾಡಿ ಗ್ರಾಮದ ವಿವಿಧ ಭಾಗಗಳಿಗೆ ಸಂಚರಿಸಿ,ಪ್ರಮುಖ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ಮಾಡಿದರು.
ಬಿಜೆಪಿ ಆಡಳಿತಕ್ಕೆ ಬರುವ ಮೊದಲು ರಾಜ್ಯದಲ್ಲಿ ಮತ್ತು ಬಂಟ್ವಾಳ ಕ್ಷೇತ್ರದ ಸ್ಥಿತಿಗತಿಯ ಬಗ್ಗೆ ಎಲ್ಲರಿಗೂ ತಿಳಿದಿರುವಂತ ವಿಚಾರ, ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕದ ದಿನಗಳನ್ನು ಅವಲೋಕನ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅವರು ತಿಳಿಸಿದರು. ಇದರ ಜೊತೆಯಲ್ಲಿ ಪ್ರತಿ ಮನೆಯ ತಾಯಂದಿರಿಗೆ ನೆಮ್ಮದಿಯಿಂದ ಜೀವನ ಮಾಡುವಂತಾಗಲು , ರಾಜ್ಯದಲ್ಲಿ ಮತ್ತು ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಾಧವ ಮಾವೆ ಮಾತನಾಡಿ, ಧರ್ಮ ಉಳಿಯಬೇಕು, ನ್ಯಾಯ ಸಿಗಬೇಕು ಎಂದಾದರೆ ಮತ್ತೊಮ್ಮೆ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ರಾಜೇಶ್ ನಾಯ್ಕ್ ಅವರು ಆಯ್ಕೆಯಾಗಿ ಬರಬೇಕು ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿತ ಕಾಂಗ್ರೆಸ್ ಪಕ್ಷದ ಪೇಮೆಂಟ್ ಸೋಶಿಯಲ್ ಮೀಡಿಯಾದ ಕಾರ್ಯಕರ್ತರು ಬಿಜೆಪಿಯ ಬಗ್ಗೆ ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದು,ಕಾರ್ಯಕರ್ತರು ಇದರ ವಿರುದ್ದ ಹೋರಾಡಬೇಕಾಗಿದೆ ಎಂದು ಅವರು ತಿಳಿಸಿದರು. ಅನಂತಾಡಿ ಗ್ರಾ.ಪಂ..ಅದ್ಯಕ್ಷ ಗಣೇಶ್ ಪೂಜಾರಿ,ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಭಂಡಾರಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ರೈ ಅನಂತಾಡಿ, ಬೂತ್ ಅಧ್ಯಕ್ಷ ತಿಮ್ಮಪ್ಪ ಗೌಡ, ಪ್ರಮುಖರಾದ ನವೀನ ಶೆಟ್ಟಿ ಪುಲ್ಕಿದಡಿ, ಶಶಿಕಾಂತ್ ಶೆಟ್ಟಿ ಬಾಳಿಕೆ,ಉಗ್ಗಪ್ಪ ಶೆಟ್ಟಿ ಕೊಂಬಿಲ, ಮತ್ತಿತರರು ಉಪಸ್ಥಿತರಿದ್ದರು.