ಬಂಟ್ವಾಳ: ಎ.20 ರಂದು ಗುರುವಾರ ಮಧ್ಯಾಹ್ನ 12.35ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಪಕ್ಷದ ಚುನಾವಣಾ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಬಂಟ್ವಾಳದ ಶ್ರೀ ವೆಂಕಟರಮಣ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮೂಲಕ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ನಾನು ಕೆಲಸ ಮಾಡದೆ ಸೋತಿಲ್ಲ, ವ್ಯಾಪಕ ಅಪಪ್ರಚಾರದಿಂದಾಗಿ ಸೋತಿದ್ದೇನೆ, ಸೋಲಿಗೆ ಬೇಸರವಿಲ್ಲ, ಸೋಲಿಸಿದ ರೀತಿಗೆ ಬೇಸರವಿದೆ ಎಂದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಾಸಕ ಅವಧಿಯಲ್ಲಿ ಮಂಜೂರಾದ ಅನೇಕ ಅಭಿವೃದ್ದಿ ಕಾಮಗಾರಿಗಳು ಅರ್ಧದಲ್ಲೇ ಬಾಕಿ ಉಳಿದಿದ್ದು ಅವುಗಳನ್ನು ಪೂರ್ಣಗೊಳಿಸುವ ಕಾರ್ಯ ಆಗಬೇಕಿದೆ. ಜನರು ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಅವರು ಮನವಿ ಮಾಡಿದರು.
ಭೂ ಅಭಿವೃದ್ದಿ ಬ್ಯಾಂಕ್ ಮೂಲಕ ರಾಜಕೀಯ ಪ್ರವೇಶ ಮಾಡಿ ಸಾಮಾಜಿಕ ಬದುಕಿನಲ್ಲಿ ಹಂತಹಂತವಾಗಿ ಪಕ್ಷದ ಜವಬ್ದಾರಿಯನ್ನು ನಿಭಾಯಿಸಿದ್ದೇನೆ, ಈ ಹಿಂದೆ ಶಾಸಕನಾಗಿದ್ದಾಗ ಮಿನಿವಿಧಾನಸೌಧ, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ, ಡಿಪೋ, ಮೆಸ್ಕಾಂ ಕಚೇರಿ, ನಿರೀಕ್ಷಣಾ ಮಂದಿರ, ಜೋಡುಮಾರ್ಗ ಉದ್ಯಾನವನ, ಸಾಲುಮರದ ತಿಮ್ಮಕ್ಕ ಉದ್ಯಾನವನ, ಬಿ.ಸಿ.ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಪುರಸಭೆ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪಕ್ಷ ಪ್ರಮುಖರಾದ ಜಯಂತಿ ವಿ. ಪೂಜಾರಿ, ಪದ್ಮಶೇಖರ್ ಜೈನ್ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಮಹಮ್ಮದ್ ಶರೀಫ್, ಜನಾರ್ದನ ಚೆಂಡ್ತಿಮಾರ್, ಸುಭಾಶ್ಚಂದ್ರ ಶೆಟ್ಟಿ, ಉಮೇಶ್ ಸಪಲ್ಯ ಬೋಳಂತೂರು, ಸುರೇಶ್ ಕುಮಾರ್ ನಾವೂರು, ಕೆ. ಸಂಜೀವ ಪೂಜಾರಿ, ನಾರಾಯಣ ನಾಯ್ಕ್, ವಾಸು ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.