ಬಂಟ್ವಾಳ: ಶಾಂತಿ,ನೆಮ್ಮದಿಯ ಜೊತೆಗೆ ಬಂಟ್ವಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರಣಕ್ಕಾಗಿ ಬಂಟ್ವಾಳ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಶಾಸಕರ ಆಯ್ಕೆಯಾಗಬೇಕು, ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರು ಸಹಕಾರ ನೀಡಿ ಗೆಲ್ಲಿಸಿ ಎಂದು ಶಾಸಕ ರಾಜೇಶ್ ನಾಯ್ಕ್ ಮನವಿ ಮಾಡಿದರು.
ಅವರು ನಾವೂರ ಶಕ್ತಿ ಕೇಂದ್ರದ ಗಂಗಾಧರ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಅಮಾಯಕರು ಜೀವ ಕಳೆದುಕೊಂಡು,ತಾಲೂಕಿನ ತಾಯಂದಿರು ನಿತ್ಯ ಕಣ್ಣೀರು ಹಾಕುವ ದಿನವನ್ನು ದೂರ ಮಾಡಿ, ಅನಗತ್ಯವಾಗಿ ಪ್ರಕರಣಗಳನ್ನು ಹಾಕಿಸಿಕೊಳ್ಳುವುದನ್ನು ನಿಲ್ಲಿಸಿ ಶಾಂತಿಯ ಬಂಟ್ವಾಳವಾಗಿ ಮಾಡಲು ಕ್ಷೇತ್ರದ ಜನರ ಸಹಕಾರದಿಂದ ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕೊರೊನಾ ಅವಧಿಯಲ್ಲಿ ಸಾವನ್ನಪ್ಪಿದ ಬಂಟ್ವಾಳದ ಮಹಿಳೆಯ ಅಂತ್ಯಕ್ರಿಯೆಗೆ ಜಾಗನೀಡದ ಸಮಯದಲ್ಲಿ ಒಡ್ಡೂರಿನ ಮನೆಯ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಿ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ ರಾಜ್ಯದ ಏಕೈಕ ಶಾಸಕ ರಾಜೇಶ್ ನಾಯ್ಕ್.ಅಂತಹ ಮಾನವೀಯ ಮೌಲ್ಯವಿರುವ ಗುಣವಂತ ವ್ಯಕ್ತಿ ರಾಜೇಶ್ ನಾಯ್ಕ್ ಅವರನ್ನು ಮತ್ತೆ ಶಾಸಕನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ನೆಹರು ವಂಶ, ಕುಟುಂಬವನ್ನು ಬದುಕಿಸಲು ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದ್ದು, ಬಿಜೆಪಿ ದೇಶವನ್ನು ಉಳಿಸಲು ಹೋರಾಟ ನಡೆಸುತ್ತಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ನಾವೂರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಹರೀಶ್ ಪ್ರಭು, ಶಕ್ತಿ ಕೇಂದ್ರದ ಪ್ರಮುಖ ಶಾಂತಪ್ಪ ಪೂಜಾರಿ, ಶಕ್ತಿ ಕೇಂದ್ರದ ಸದಸ್ಯ ಸದಾನಂದ ನಾವೂರ, ಗ್ರಾ.ಪಂ.ಸದಸ್ಯರಾದ ವಿಜಯ ನಾವೂರ, ಜನಾರ್ದನ, ತ್ರಿವೇಣಿ,ಲೀಲಾ ಮತ್ತಿತರರು ಉಪಸ್ಥಿತರಿದ್ದರು