ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಸಚಿವರಿಗೆ, ದೊಡ್ಡ ಉದ್ಯಮಿಗಳಿಗೆ ಇಂದು ಅಮೃತಕಾಲ, ಪ್ರತಿದಿನವೂ ದಲಿತ ದೌರ್ಜನ್ಯ ನಡೆಯುತ್ತಿದ್ದು, ಅದೀಗ ಹೆಚ್ಚಾಗಿದೆ, ದಲಿತರಿಗೆ ಅಮೃತ ಕಾಲಬರುವುದು ಯಾವಾಗ? ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಪ್ರಶ್ನಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕಗಳ ನೇತೃತ್ವದಲ್ಲಿ ಬಿ.ಸಿ.ರೋಡಿನ ಸ್ಪರ್ಶಾಕಲಾಮಂದಿರದಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ದಲಿತವಿರೋಧಿಯಾಗಿರುವ ಬಿಜೆಪಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿದೆ. ಸಂವಿಧಾನವನ್ನು ತಿರುಚುವ ಕೆಲಸವನ್ನು ಸರಕಾರ ಮಾಡುತ್ತಿದ್ದು, ದಲಿತರಿಗೆ ಅನೇಕ ಕ್ಷೇತ್ರಗಳಲ್ಲಿ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ. ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಗೆ ನೀಡಲಾಗುತ್ತಿದ್ದು, ಅಲ್ಲಿ ದಲಿತರಿಗೆ ಉದ್ಯೋಗವಿಲ್ಲ, ಇಡೀ ದೇಶದಲ್ಲಿ ೨೪ ಲಕ್ಷ ಉದ್ಯೋಗಗಳು ಖಾಲಿ ಇದ್ದು, ದಲಿತರಿಗೆ ೬ ಲಕ್ಷ ಉದ್ಯೋಗಗಳು ಅವುಗಳಲ್ಲಿ ಸೇರಿವೆ. ಕರ್ನಾಟಕದ ಮೀಸಲಾತಿ ಎಂಬುದು ಕಣಜದ ಗೂಡಾಗಿದೆ ಎಂದರು. ಭೂಮಸೂದೆ ಮೂಲಕ ಕಾಂಗ್ರೆಸ್ ಪಕ್ಷ ದಲಿತರಿಗೂ ಸೇರಿದಂತೆ ಶೋಷಿತರಿಗೆ ಜಮೀನು ಸಿಗುವಂತೆ ಮಾಡಿತು. ದೇಶದಾದ್ಯಂತ ದಲಿತಪರವಾಗ ಕಾನೂನುಗಳನ್ನು ಕಾಂಗ್ರೆಸ್ ತಂದಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಭವ್ಯಭಾರತ ಎಂದು ಹೇಳುತ್ತಾ, ನಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಇತಿಹಾಸವನ್ನು ಮರೆಮಾಚಲಾಯಿತು. ಬ್ಯಾಂಕುಗಳು ರಾಷ್ಟ್ರೀಕರಣವಾದ ಮೇಲೆ ಸಾಮಾನ್ಯರಿಗೂ ಸಾಲ ದೊರಕಾರಂಭಿಸಿತು ಎಂದರು.
ವಿಧಾನಪರಿಷತ್ತು ಸದಸ್ಯ ಡಾ. ಮಂಜುನಾಥ ಭಂಡಾರಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಜಾಪ್ರಭುತ್ವ ಆಶಯಗಳು ಸಮರ್ಪಕವಾಗಿ ಇನ್ನೂ ಈಡೇರಿಲ್ಲ, ಕೇಂದ್ರ ಸರಕಾರ ಸಂವಿಧಾನದ ಆಶಯಗಳನ್ನು ಜೊತೆಗೆ ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯವನ್ನು ಮಾಡುತ್ತಿದೆ. ಸಂವಿಧಾನದಲ್ಲಿ ಹೇಳಲಾದ ಸಮಾನತೆಯನ್ನು ನಾವು ಹೊಂದಿದ್ದೇವೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಈ ಬಾರಿ ನಿಶ್ಚಿತವಾಗಿಯೂ ಅಧಿಕಾರಕ್ಕೆ ಬರಲಿದ್ದು, ದ.ಕ.ಜಿಲ್ಲೆಯ ಪ್ರಮುಖ ಸಮಸ್ಯೆಯಾದ ಡಿ.ಸಿ.ಮನ್ನಾ ಜಮೀನನ್ನು ಅರ್ಹರಿಗೆ ನ್ಯಾಯೋಚಿತವಾಗಿ ನೀಡುವುದು ನಿಶ್ಚಿತ ಎಂದು ಹೇಳಿದರು.
ಡಿಸಿಸಿ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ರಾಜ್ಯ ಕಾಂಗ್ರೆಸ್ ಪ.ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನ, ಜಿಲ್ಲಾ ಕಾಂಗ್ರೆಸ್ ಪ.ಜಾತಿ ವಿಭಾಗ ಅಧ್ಯಕ್ಷ ಶೇಖರ ಕುಕ್ಕೇಡಿ, ಕೆಪಿಸಿಸಿ ಸದಸ್ಯ ಡಾ. ರಘು, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ, ಮನಪಾ ಮಾಜಿ ಕಾರ್ಪೊರೇಟರ್ ಅಪ್ಪಿ, ರಾಜ್ಯ ಕಾಂಗ್ರೆಸ್ ಪಪಂ ವಿಭಾಗದ ಅಧ್ಯಕ್ಷ ಪಾಲಯ್ಯ, ಜಿಲ್ಲಾ ಪ.ಪಂಗಡ ವಿಭಾಗ ಅಧ್ಯಕ್ಷ ನಾರಾಯಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಚಂಡ್ತಿಮಾರ್, ಜಿಲ್ಲಾ ಕಾಂಗ್ರೆಸ್ ಪಜಾತಿ ವಿಭಾಗ ಸಂಚಾಲಕಿ ಸರೋಜಿನಿ, ಬಂಟ್ವಾಳ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ ಸಪಲ್ಯ, ಪ.ಜಾತಿ ಉಡುಪಿ ವಿಭಾಗ ಮುಖ್ಯಸ್ಥ ಜಯಕುಮಾರ್, ಪುತ್ತೂರು ಘಟಕಾಧ್ಯಕ್ಷ ಮಹಾಲಿಂಗ ನಾಯ್ಕ, ಐಕ್ಯತಾ ಸಮಾವೇಶ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್, ಎಂ.ಎಸ್.ಮುಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಪ್ರಮುಖರಾದ ನಾಗರಾಜ್ ಎಸ್. ಲಾಯಿಲ, ಬಂಟ್ವಾಳ ಬ್ಲಾಕ್ ಪಜಾತಿ ವಿಭಾಗ ಅಧ್ಯಕ್ಷ ಅಣ್ಣು ಖಂಡಿಗ, ಪಾಣೆಮಂಗಳೂರು ಬ್ಲಾಕ್ ಪಪಂ ವಿಭಾಗ ಅಧ್ಯಕ್ಷ ಚನ್ನಪ್ಪ ನಾಯ್ಕ, ಪಾಣೆಮಂಗಳೂರು ಬ್ಲಾಕ್ ಪಜಾ ವಿಭಾಗ ಅಧ್ಯಕ್ಷ ಪ್ರೀತಮ್ ರಾಜ್ ದ್ರಾವಿಡ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಪಂ ವಿಭಾಗ ಅಧ್ಯಕ್ಷ ಚಂದ್ರಹಾಸ ನಾಯ್ಕ, ಕೆಪಿಸಿಸಿ ಸದಸ್ಯ ನಾಗರಾಜ್ ಉಪಸ್ಥಿತರಿದ್ದರು. ಬಾಬಾಸಾಹೇಬ್ ಅಂಬೇಡ್ಕ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ ಭೀಮಗೀತೆ ಹಾಡಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಚಂಡ್ತಿಮಾರ್ ಪ್ರಾಸ್ತಾವಿಕ ಮಾತನಾಡಿದರು. ಸುರೇಶ್ ಪಿ.ಬಿ ಸ್ವಾಗತಿಸಿದರು. ಚಂದ್ರಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ರಕ್ತಶ್ವರಿ ದೇವಸ್ಥಾನ ಮುಂಭಾಗದಿಂದ ವೇದಿಕೆವರೆಗೆ ಮೆರವಣಿಗೆ ನಡೆಯಿತು.