ಬಂಟ್ವಾಳ : ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಎಂಬ ಕಾರ್ಯಕ್ರಮದನ್ವಯ ಬಂಟ್ವಾಳ ತಾಲೂಕು ತಹಶೀಲ್ದಾರರ ಗ್ರಾಮವಾಸ್ತವ್ಯ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಬಂಟ್ವಾಳ ತಹಶೀಲ್ದಾರ್ ಸತೀಶ ಕೂಡಲಿಗಿ ಅವರು ಮಾತನಾಡಿ, ಸರಕಾರದ ವತಿಯಿಂದ ಗ್ರಾಮೀಣ ಜನತೆಯ ಸಮಸ್ಯೆಗಳ ಬಗ್ಗೆ ಅರಿತು ಸ್ಥಳದಲ್ಲಿ ಪರಿಹಾರ ಕಲ್ಪಿಸಲು ಗ್ರಾಮ ಭೇಟಿ ಅಭಿಯಾನ ನಡೆಸಲಾಗುತ್ತಿದ್ದು, ಗ್ರಾಮಸ್ಥರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರ ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ. ಪಿಲಾತಬೆಟ್ಟು ಗ್ರಾಮಸ್ಥರ ಹಲವಾರು ಸಮಸ್ಯೆಗಳಿಗೆ ಇಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಹರಿಸಲು ಸಹಕಾರಿಯಾಗಿದೆ ಎಂದರು. ಗ್ರೇಡ್ ೨ ತಹಶೀಲ್ದಾರ್ ದಯಾನಂದ, ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಹೆಗ್ಡೆ, ಪಿಡಿಒ ಯಮುನಪ್ಪ ಕೊರವರ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಪ್ರಮಾಣಪತ್ರ ವಿತರಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಶಿಕ್ಷಣಾಽಕಾರಿ ಜ್ಞಾನೇಶ್, ತಾಲೂಕಿನ ವಿವಿಧ ಇಲಾಖೆಗಳ ಇಲಾಖಾಽಕಾರಿಗಳು, ಗ್ರಾ.ಪಂ.ಸದಸ್ಯರು, ಸಿಬಂದಿ ವರ್ಗ, ಮತ್ತಿತರರು ಭಾಗವಹಿಸಿದ್ದರು.
ಕಂದಾಯ ನಿರೀಕ್ಷಕ ಜನಾರ್ದನ ಸ್ವಾಗತಿಸಿದರು. ಉಪ ತಹಶೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಹಶೀಲ್ದಾರ್ ಅವರು ಅಹವಾಲು ಸ್ವೀಕರಿಸಿದರು.