ಬಂಟ್ವಾಳ: ಇಲ್ಲಿನ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮುಖ್ಯಾಧಿಕಾರಿಯಾಗಿ ಕರ್ತವ್ಯದ್ದಲ್ಲಿದ್ದ ಎಂ. ಆರ್. ಸ್ವಾಮಿ ಅವರು ಪುತ್ತೂರು ನಗರ ಸಭೆ ರೆವೆನ್ಯೂ ಆಫೀಸರ್ ಆಗಿ ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಲೀನಾ ಬ್ರಿಟ್ಟೋ ಆಗಮಿಸಿದ್ದಾರೆ.
ಈ ಹಿಂದೆ ಎರಡು ಬಾರಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಅನುಭವ ಹೊಂದಿರುವ ಇವರ ಅವಧಿಯಲ್ಲಿ ವಿವಾದದ ಕೇಂದ್ರ ಬಿಂದುವಾಗಿ ಹಲವು ವರ್ಷಗಳಿಂದ ನಿಷ್ಪ್ರಯೋಜಕವಾಗಿದ್ದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ತರಕಾರಿ ತ್ಯಾಜ್ಯ ಸಹಿತ ಹಸಿ ಕಸಗಳನ್ನು ಬಂಟ್ವಾಳ ಪುರಸಭೆಯ ಹಿಂಭಾಗದಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕವನ್ನು, ಎರೆಹುಳ ಗೊಬ್ಬರ ಘಟಕವನ್ನು ಆರಂಭಿಸಿ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡಿದ್ದರು. ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಹಿನ್ನಲೆಯಲ್ಲಿ ಸಿಸಿ ಕ್ಯಾಮರ ಅಳವಡಿಸುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡು ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಅದೇ ಸಂದರ್ಭದಲ್ಲಿ ಅವರು ಮಂಗಳೂರು ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡಿದ್ದರು. ಇದೀಗ ಪದೋನ್ನತಿಗೊಂಡು ಮತ್ತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ಆರಂಭಿಸಿದ್ದಾರೆ.