ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ನಿವಾಸಿ ಮೈಮುನಾ ಎಂಬವರ ಮನೆಗೆ ಯಾರು ಇಲ್ಲದ ವೇಳೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ವಾಚುಗಳು ಹಾಗೂ ನಗದು ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮೈಮೂನಾ ಅವರು ಫೆ.27 ರಂದು ತನ್ನ ತಂಗಿ ಮಗಳ ಹುಟ್ಟುಹಬ್ಬದ ನಿಮಿತ್ತ ಮದ್ಯರಾತ್ರಿ 12.30 ಗಂಟೆಗೆ ಉಪ್ಪಿನಂಗಡಿ ಮೂರುಗೋಳಿಗೆ ಮನೆಯವರೊಂದಿಗೆ ಹೋಗಿ ಅಲ್ಲೇ ಉಳಿದುಕೊಂಡಿದ್ದು, ಮಾ.1 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗವನ್ನು ತೆರೆಯಲು ನೋಡಿದಾಗ ಬಾಗಿಲಿಗೆ ಅಳವಡಿಸಿದ ಲಾಕ್ ಮುರಿದಿದ್ದು ಕಂಡು ಬಂದಿದ್ದು ಬಾಗಿಲನ್ನು ದೂಡಿದಾಗ ಬಾಗಿಲು ಒಳಗೆ ಹೋಗಿದೆ. ಇದರಿಂದ ಗಾಬರಿಗೊಂಡು ಮೈಮೂನಾ ವಿಷಯವನ್ನು ಗಂಡ ಮತ್ತು ತಾಯಿಗೆ ಹೇಳಿ ಎಲ್ಲರೂ ಒಟ್ಟಿಗೆ ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ 4 ಗೋದ್ರೇಜ್ ಕಪಾಟಿನ ಬೀಗವನ್ನು ತೆರೆದು ಅದರೊಳಗಿದ್ದ ಬಟ್ಟೆ ಬರೆಗಳು ಇತ್ಯಾದಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಮಂಚದ ಮೇಲೆ ಬಿಸಾಡಿದ ಸ್ಥಿತಿಯಲ್ಲಿತ್ತು. ಕಪಾಟಿನಲ್ಲಿದ್ದ ಅಂದಾಜು ಬೆಲೆ 7,08,000 ರೂಪಾಯಿ ಮೌಲ್ಯದ 236 ಗ್ರಾಂ ಚಿನ್ನಾಭರಣಗಳು, ಅಂದಾಜು ಮೌಲ್ಯ 1,17,000 ರೂಪಾಯಿ ಮೌಲ್ಯದ ವಾಚುಗಳು ಹಾಗೂ 47,000 ರೂಪಾಯಿ ನಗದನ್ನು ಯಾರೋ ಕಳ್ಳರು ದೋಚಿ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಮನೆಯ ಮುಂಬಾಗಿಲನ್ನು ಆಯುಧದಿಂದ ಮುರಿದು ಮನೆಯ ಒಳಗೆ ಹೋಗಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.