ಬಂಟ್ವಾಳ: ತುಳುನಾಡಿನ ಕಂಬಳ ಕ್ರೀಡೆ ದೇಶ ವಿದೇಶಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವಂತೆಯೇ ಕಂಬಳದ ಕೋಣಗಳಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್, ಸ್ಯಾಂಡಲ್ವುಡ್, ಕ್ರಿಕೆಟ್ ತಾರೆಗಳಂತೆ ಕಂಬಳದ ಕೋಣಗಳಿಗೂ ಸ್ಟಾರ್ ವ್ಯಾಲ್ಯೂ ಬಂದಿರುವುದು ವಿಶೇಷ. ಈ ಪೈಕಿ ಕಂಬಳ ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿಮಾನಿಯನ್ನು ಹೊಂದಿರುವ ಕೋಣ ಇರುವೈಲು ಪಾಣೆಲದ ತಾಟೆ. ಬಂಟ್ವಾಳ ತಾಲೂಕಿನ ತಾಟೆಯ ಅಪ್ಪಟ ಅಭಿಮಾನಿಯೋರ್ವ ತನ್ನ ಹೊಟೇಲ್ ಗೆ “ಇರುವೈಲು ತಾಟೆ” ಎಂದು ಹೆಸರು ಇಟ್ಟುಕೊಂಡು ತಾಟೆಯ ಮೇಲಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಶಂಭೂರಿನ ಕೊಪ್ಪಳ ನಿವಾಸಿಯಾಗಿರುವ ಜಯಂತ್ ಅಂಚನ್ 9 ವರ್ಷಗಳಿಂದ ಶಿವಶಕ್ತಿ ಎನ್ನುವ ಫಾಸ್ಟ್ ಪುಡ್ ಉದ್ಯಮ ನಡೆಸುತ್ತಿದ್ದರು. ಕಂಬಳ ಪ್ರೇಮಿಯಾಗಿರುವ ಇವರು ಇರುವೈಲು ತಾಟೆಯ ಅಪ್ಪಟ ಅಭಿಮಾನಿ. ಕಳೆದ ಒಂದು ವರ್ಷದ ಹಿಂದೆ ತನ್ನ ಫಾಸ್ಟ್ಪುಡ್ ಕೇಂದ್ರವನ್ನು ಹೊಟೇಲ್ ಆಗಿ ಮೇಲ್ದರ್ಜೆಗೇರಿಸಿದಾಗ ಇರುವೈಲು ತಾಟೆ ಎಂದು ನಾಮಕರಣಗೊಳಿಸಿದ್ದಾರೆ. ಶಂಭೂರಿನ ಶೇಡಿಗುರಿಯಲ್ಲಿರುವ “ಹೊಟೇಲ್ ಇರುವೈಲು ತಾಟೆ” ಈಗ ಜನರ ಗಮನ ಸೆಳೆಯುತ್ತಿದೆ.
ಮೆಚ್ಚುಗೆಯ ಮಹಾಪೂರ:
ಜಯಂತ್ ಅಂಚನ್ ಅವರು ತನ್ನ ಹೊಟೇಲ್ಗೆ ಕಂಬಳ ಕೋಣನ ಹೆಸರನ್ನು ಇಟ್ಟ ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಚಾರವಾಗುತ್ತಿದ್ದಂತೆಯೇ ವಿದೇಶಗಳಲ್ಲಿರುವ ಇರುವೈಲು ತಾಟೆಯ ಅಭಿಮಾನಿಗಳು ದೂರವಾಣಿ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಟೇಲ್ ನ ನಾಮಫಲಕವನ್ನು ನೋಡಿ ಅನೇಕ ಮಂದಿ ತಾಟೆಯ ಅಭಿಮಾನಿಗಳು ಹೊಟೇಲ್ಗೆ ಬಂದು ಊಟ ಉಪಹಾರ ಸೇವಿಸಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಜಯಂತ ಅಂಚನ್. ಹೊಟೇಲ್ ನ ನಾಮಫಲಕ ಆದಿಯಾಗಿ ಒಳಭಾಗದಲ್ಲಿರುವ ಸ್ಟಿಕ್ಕರ್ ಗಳು ಇರುವೈಲು ತಾಟಯದ್ದೆ. ಮುಂದಿನ ದಿನಗಳಲ್ಲಿ ಹೊಟೇಲ್ ನವೀಕರಣಗೊಳ್ಳಲಿದ್ದು ಒಳಭಾಗದಲ್ಲಿ ಸಂಪೂರ್ಣವಾಗಿ ತಾಟೆಯ ಚಿತ್ರವನ್ನು ಚಿತ್ರಿಸುವುದಾಗಿ ಜಯಂತ್ ಅಂಚನ್ ತಿಳಿಸಿದ್ದಾರೆ.
ಕಂಬಳ ಅಭಿಮಾನಿಯಾಗಿರುವ ಜಯಂತ್ ಅಂಚನ್ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳನ್ನು ವೀಕ್ಷಿಸುತ್ತಾರೆ. ಕಂಬಳಕ್ಕೆ ಹೋಗಲು ಸಾಧ್ಯವಾಗದಿದ್ದರೆ ನೇರ ಪ್ರಸಾರದ ಮೂಲಕ ಮೊಬೈಲ್ ನಲ್ಲಿ ನೋಡುತ್ತಾರೆ. ಇವರ ಮನೆ ಮಂದಿಯೂ ಕಂಬಳಾಭಿಮಾನಿಗಳು. ಅಜ್ಜ ಕೆಲೆಂಜಿಗುರಿ ಮುಂಡಪ್ಪ ಪೂಜಾರಿ ಕಂಬಳದ ಕೋಣಗಳನ್ನು ಸಾಕುತ್ತಿದ್ದರು. ಅಂಚನ್ ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಇರುವೈಲು ತಾಟೆಯೆಂದರೆ ಅಚ್ಚುಮೆಚ್ಚು. ಮಧ್ಯ ರಾತ್ರಿ ಎರಡೂ ಗಂಟೆ ಕಳೆದರೂ ತಾಟೆಯ ಓಟವನ್ನು ನೋಡಲು ಮಕ್ಕಳು ಕಾದು ಕುಳಿತಿರುತ್ತಾರೆ. ಇವರ ಸಣ್ಣ ಮಗಳು ಮಾನ್ವಿಗೆ ಮನೆಮಂದಿ ಇಟ್ಟಿರುವ ನಿಕ್ ನೇಮ್ ಕೂಡ
“ತಾಟೆ”!
ತಾಟೆ ಗೇಮ್ ಫಿನಿಷರ್ ಕೋಣ. ಅದು ಕಂಬಳದ ಕರೆಯಲ್ಲಿ ತಲೆ ಎತ್ತಿ ಓಡವ ಶೈಲಿ ತುಂಬಾ ಇಷ್ಟ. ನಾನು ಅದರ ಅಪ್ಪಟ ಅಭಿಮಾನಿ, ಆ ಕಾರಣಕ್ಕಾಗಿ ಹೊಟೇಲ್ಗೆ ಇರುವೈಲು ತಾಟೆ ಎಂದು ಹೆಸರಿಟ್ಟಿದ್ದೇನೆ- ಜಯಂತ್ ಅಂಚನ್, ಹೊಟೇಲ್ ಉದ್ಯಮಿ