ಬಂಟ್ವಾಳ: ಮುಂದಿನ ಮಾರ್ಚ್ ತಿಂಗಳ ಅಂತ್ಯದವರೆಗೆ ಬೇಕಾಕುವಷ್ಟು ನೀರಿನ ಲಭ್ಯತೆ ತುಂಬೆ ವೆಂಟ್ಡ್ ಡ್ಯಾಂನಲ್ಲಿದ್ದು ಜನರು ನೀರನ್ನು ಅನಾವಶ್ಯಕ ವ್ಯಯ ಮಾಡದೇ ಸದ್ಬಳಕೆ ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್ ತಿಳಿಸಿದರು.
ತುಂಬೆ ವೆಂಟೆಡ್ ಡ್ಯಾಂನಲ್ಲಿ ಬುಧವಾರ ಗಂಗಾಪೂಜೆ ನೆರವೇರಿಸಿ ಬಳಿಕ ನೇತ್ರಾವತಿ ನದಿಗೆ ಭಾಗಿನ ಅರ್ಪಿಸಿ ಮಾತನಾಡಿದರು. ವಾಹನ ತೊಳೆಯಲು, ಕಟ್ಟಡ ನಿರ್ಮಾಣ ಕಾಮಗಾರಿ ಮೊದಲಾದ ಕೆಲಸಗಳಿಗೆ ಅನಾವಶ್ಯಕವಾಗಿ ನೀರನ್ನು ಬಳಸುವುದನ್ನು ತಡೆಯುವುದರಿಂದ ನೀರಿನ ದುಂದುವೆಚ್ಚವನ್ನು ತಪ್ಪಿಸಬಹುದು, ಕಳೆದ ನಾಲ್ಕು ವರ್ಷಗಳ ಬೇಸಿಗೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಈ ಬಾರಿಯೂ ನೀರಿನ ಅಭಾವ ಬರುವುದಿಲ್ಲ ಎನ್ನುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ ಬೇಸಿಗೆ ಪೂರ್ತಿ ನದಿಗೆ ಒಳಹರಿವು ಬರಲಿ, ಸಮಯಕ್ಕೆ ಸರಿಯಾಗಿ ಹಿಂಗಾರು ಮಳೆ ಬಂದು ಡ್ಯಾಂ ತುಂಬಿ ಹರಿಯಲಿ, ನೇತ್ರಾವತಿ ನದಿ ನೀರನ್ನು ಅವಲಂಬಿಸಿರುವಂತಹ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಜನರು ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದ ಜನರಿಗೆ ಮುಂದಿನ ಬೇಸಿಗೆಯಲ್ಲಿ ನೀರಿನ ಅಭಾವವಾಗದಿರಲಿ ಎನ್ನುವುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ, ಜಲಸಿರಿ ಯೋಜನೆಯ ಮೂಲಕ ವಿತರಣ ಜಾಲ ಬಲಪಡಿಸುವ ಯೋಜನೆ ಇದ್ದು ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಿ ಎಲ್ಲ ಪ್ರದೇಶಗಳಿಗೂ ಸರಿ ಸಮಾನವಾಗಿ ದಿನವಿಡಿ ನೀರು ಪೂರೈಸುವ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕೀಲಾ, ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕೊಟ್ಟಾರಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ರಘು ಸಾಲ್ಯಾನ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ ಕೋಟ್ಯಾನ್, ಪ್ರತಿಪಕ್ಷ ನಾಯಕ ನವೀನ್ ಆರ್. ಡಿಸೋಜಾ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಹಿರಿಯ ಸದಸ್ಯ ಲ್ಯಾನ್ಸಿ ಪಿಂಟೋ, ಸುಮಂಗಲ, ವೇದಾವತಿ, ತುಂಬೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಬಿ. ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.