ಬಂಟ್ವಾಳ: ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಫೆ.8 ರಿಂದ ಫೆ. 10ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ ತಿಳಿಸಿದರು.
ಫೆ. 8ರಂದು ಬೆಳಿಗ್ಗೆ 8ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಸಂಜೆ 3 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಶಾಸಕ ರಾಜೇಶ್ ನಾಯ್ಕ್ ಹೊರೆಕಾಣಿಕೆ ಮೆರವಣಿಗೆ ಉದ್ಘಾಟಿಸಲಿದ್ದಾರೆ, ಕಾರಿಂಜ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಪಿ. ಜಿನರಾಜ ಆರಿಗ ಗೌರವ ಉಪಸ್ಥಿತರಿರುವವರು.
ರಾತ್ರಿ 7.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಪರಿಮಳ ಕಾಲನಿ ನಾಟಕ ನಡೆಯಲಿದೆ. ಫೆ. 9 ರಂದು ಬೆಳಿಗ್ಗೆ 9.28ಕ್ಕೆ ಮೀನ ಲಗ್ನದಲ್ಲಿ ಮಹಾಗಣಪತಿ ಪ್ರತಿಷ್ಠೆ, ಶ್ರೀ ರಾಘವೇಂದ್ರ ಗುರುಗಳ ಬಿಂಬ ಪ್ರತಿಷ್ಠಾಪನೆ, ಪರಿವಾರ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶ, ಬ್ರಹ್ಮಕಲಶಕ್ಕೆ ಮಂಟಪ ಸಂಸ್ಕಾರ, ಆಶ್ಲೇಷ ಬಲಿ, ನಾಗತಂಬಿಲ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿ ಆಶೀರ್ವಚನ ನೀಡುವರು, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ, ಉಳಿಯ ಧರ್ಮಅರಸು ಉಳ್ಳಾಲ್ತಿ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ದಿವ್ಯ ಉಪಸ್ಥಿತರಿರುವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲನೆ ಮಾಡುವರು, ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ವಿಧಾನ ಪರಿಷತ್ತ್ ಸದಸ್ಯರಾದ ಮಂಜುನಾಥ ಭಂಡಾರಿ, ಪ್ರತಾಪ್ ಸಿಂಹ ನಾಯಕ್, ಕೆ. ಹರೀಶ್ ಕುಮಾರ್ ಮೊದಲಾದವರು ಭಾಗವಹಿಸುವರು. ಆ ದಿನ ಸಂಜೆ 3.30ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ, ಸಂಜೆ 5ರಿಂದ ಬ್ರಹ್ಮಕಲಶ ಪೂರಣಿ, ಕುಂಭೇಶ ಕರ್ಕರಿ ಪೂಜೆ, ದುರ್ಗಾ ಪೂಜೆ, ಕಲಶಾಧಿವಾಸ, ಬಲಿ, ಮಹಾಪೂಜೆ ನಡೆಯಲಿದೆ. ರಾತ್ರಿ 6 ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಯಿಂದ ಶ್ರೀ ಗಾಯತ್ರಿ ಮಹಾತ್ಮೆ ಯಕ್ಷಗಾನ ನಡೆಯಲಿದೆ ಎಂದರು.
ಫೆ. 10 ರಂದು ಬೆಳಿಗ್ಗೆ 9.24ರ ಮೀನ ಲಗ್ನದಲ್ಲಿ ಶ್ರೀ ಗಾಯತ್ರಿ ದೇವಿಗೆ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ನ್ಯಾಸ ಪೂಜೆ, ಗಾಯತ್ರಿ ಯಾಗ, ಮಹಾಪೂಜೆ, ಪ್ರತಿಜ್ಞಾವಿಧಿ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ 11 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸುವರು, ಶಾಸಕ ರಾಜೇಶ್ ನಾಯ್ಕ್ ಯು. ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕಿಯೋನಿಕ್ಸ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಭೀಮ ದ್ರೌಪದಿ ಶ್ರೀ ಕೃಷ್ಣಾ ಸಂಧಾನ ಯಕ್ಷಗಾನ ತಾಳಮದ್ದಲೆ, ಸಂಜೆ 5.30ಕ್ಕೆ ರಂಗ ಪೂಜೆ, ರಾತ್ರಿ 7 ರಿಂದ ಪರಿವಾರ ದೈವಗಳಾದ ಮಹಿಷಂದಾಯ, ರಕ್ತೇಶ್ವರೀ, ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ರಘುಸಪಲ್ಯ, ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ಉಪಸ್ಥಿತರಿದ್ದರು.