ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿಯವರ ದೇವಾಲಯದಲ್ಲಿ ನವೀಕೃತ ಚರ್ಚ್ ಹಾಗೂ ನೂತನ ಗುರುನಿವಾಸದ ಉದ್ಘಾಟನೆ ಫೆ.13ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಚರ್ಚ್ ನ ಧರ್ಮಗುರುಗಳಾದ ವಂ.ಫಾ.ಫ್ರೆಡ್ರಿಕ್ ಮೊಂತೇರೋ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಉದ್ಘಾಟನೆ ನೆರವೇರಿಸಿ, ಆಶೀರ್ವಚನ ನೀಡುವರು. ಗೌರವ ಅತಿಥಿಗಳಾಗಿ ಕ್ಯಾಲಿಕಟ್ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರುಗಳಾದ ಅತಿವಂದನೀಯ ಮೊನ್ಸಿಂಜೊರ್ ಡಾ. ಜೆನ್ಸನ್ ಪುತ್ತನ್ ವಿತ್ತಿಲ್, ಬಂಟ್ವಾಳ ವಲಯ ಪ್ರಧಾನ ಧರ್ಮಗುರುಗಳಾದ ಅತಿ ವಂದನೀಯ ಫಾ. ವಲೇರಿಯನ್ ಡಿಸೋಜ, ಸಿಸ್ಟರ್ಸ್ ಆಫ್ ಸೈಂಟ್ ಜೋಸೆಫ್ ಕ್ಲೂನಿ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿರುವ ಅತಿ ವಂದನೀಯ ಧರ್ಮಭಗಿನಿ ಅನ್ನೀಸ್ ಕಲ್ಲರಕಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ತು ಸದಸ್ಯ ಕೆ.ಹರೀಶ್ ಕುಮಾರ್, ಅಲ್ಲಿಪಾದೆ ಕ್ಲೂನಿ ಕಾನ್ವೆಂಟ್ ಸುಪೀರಿಯರ್ ವಂ.ಧರ್ಮಭಗಿನಿ ನರ್ಸಿಜಾ ಸಿಕ್ವೆರಾ ಭಾಗವಹಿಸುವರು ಎಂದರು.
ಉದ್ಘಾಟನೆಗೆ ಪೂರ್ವಭಾವಿಯಾಗಿ ಭಾನುವಾರ ಫೆ.12ರ ಸಂಜೆ 3.30ಕ್ಕೆ ಮೊಡಂಕಾಪು ಚರ್ಚ್ ವಠಾರದಿಂದ ಸರ್ವಧರ್ಮೀಯರ ಹೊರೆಕಾಣಿಕೆ, 14ರಂದು ಧಾರ್ಮಿಕರ ದಿನ, ಸಂಜೆ ಸೌಹಾರ್ದ ಕೂಟ, ಬಳಿಕ ನಮಸ್ಕಾರ ಮಾಸ್ಟ್ರೆ ನಾಟಕ, 15ರಂದು ಸಂತ ಅಂತೋನಿಯವರ ವಾರ್ಷಿಕ ಹಬ್ಬ, 16ರಂದು ದಾನಿಗಳ ಹಾಗೂ ಕಾರ್ಮಿಕರ ದಿನ, 17ರಂದು ಮಕ್ಕಳು ಹಾಗೂ ಯುವಜನರ ದಿನ, 18ರಂದು ಕ್ರೈಸ್ತ ಕುಟುಂಬಗಳ ದಿನ, 19ರಂದು ಸಾಮೂಹಿಕ ಪ್ರಥಮ ಪರಮಪ್ರಸಾದ ದಿನ ನಡೆಯಲಿದೆ ಎಂದರು. ಅಂದು ಸಂಜೆ ಕೊಂಕಣಿ ಸಂಗೀತ, ಕಾಮಿಡಿ ಶೋ ಇರಲಿದೆ ಎಂದು ಮಾಹಿತಿ ನೀಡಿದರು.
ನೆಲಮಟ್ಟದಿಂದ ಮೇಲಿನ ಶಿಲುಬೆಯವರೆಗೆ 85 ಅಡಿ ಎತ್ತರವಿರುವ ಇಗರ್ಜಿಯ ಕಟ್ಟಡವಿದ್ದು, 10 ಆಡಿ ಎತ್ತರವಿರುವ ಸಂತ ಅಂತೋನಿಯವರ ಅನನ್ಯ ಪ್ರತಿಮೆ ನವೀಕೃತ ಇಗರ್ಜಿಯಲ್ಲಿರಲಿದೆ. ಭಾರತದಲ್ಲೇ ಸೇವೆಸಲ್ಲಿಸಿದ ಹಾಗೂ ಭೇಟಿ ನೀಡಿದ ಸಂತರ ಪ್ರತಿಮೆಗಳು, ವರ್ಣರಂಜಿತ ಗಾಜಿನಲ್ಲಿ ಮೇರಿಮಾತೆಯ ಜಪಸರದ 20 ರಹಸ್ಯಗಳು, ಇಗರ್ಜಿಯ ಒಳಗೆ ಪ್ರಾಚೀನ ಶೈಲಿಯ ಮರದ ಕೆತ್ತನೆ, ಮಧ್ಯದಲ್ಲಿ ಸಂತ ಅಂತೋನಿಯವರ 15,ಇಗರ್ಜಿಯ ಒಳಗೆ ಪ್ರಾಚೀನ ಶೈಲಿಯ ಮರದ ಕೆತ್ತನೆ, ಮಧ್ಯದಲ್ಲಿ ಸಂತ ಅಂತೋನಿಯವರ 13 ಪವಾಡಗಳ ದೃಶ್ಯಗಳು, ಗ್ಯಾಲರಿಗಳ ಎರಡೂ ಪಾರ್ಶ್ವಗಳಲ್ಲಿ ವೃತ್ತಾಕಾರದಲ್ಲಿ ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ ಕ್ರಿಸ್ತನ ಶಿಲುಬೆ ಹಾದಿಯ 14 ದೃಶ್ಯಗಳು ಇರಲಿವೆ ಎಂದರು.
ಈ ಸಂದರ್ಭ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೊರಾಸ್, ಕಾರ್ಯದರ್ಶಿ ಕಿರಣ್ ನೊರೊನ್ಹಾ, ಸಂಯೋಜಕರಾದ ಲಾರೆನ್ಸ್ ಡಿಸೋಜ, ಪ್ರಮುಖರಾದ ಲಿಯೋ ಫೆರ್ನಾಂಡೀಸ್, ಪ್ರವೀಣ್ ಪಿಂಟೋ, ಬೆನೆಡಿಕ್ಟ್ ವಾಲ್ಡರ್, ಮೆಲರೊಯಿ ಡಿಸೋಜ, ಮಡ್ತಿನಿ ಸ್ವಿಕೇರ ಉಪಸ್ಥಿತರಿದ್ದರು.