ಬಂಟ್ವಾಳ: ಸನಾತನ ಹಿಂದೂ ಧರ್ಮಕ್ಕೆ ದೇವಸ್ಥಾನ, ಮಠ, ಭಜನಾಮಂದಿರ, ಗೋಶಾಲೆಗಳು ರಕ್ಷಣೆಯ ಕೋಟೆಗಳು. ಇವು ಭದ್ರವಾಗಿದ್ದರೆ ನಮ್ಮ ಧರ್ಮವು ಭದ್ರವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಶ್ರದ್ಧಾಕೇಂದ್ರಗಳ ಬಗ್ಗೆ ಜನರಲ್ಲಿ ಆಸ್ಥೆ ಬರುತ್ತಿರುವುದು ಸುದೈವ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಭಿನಂದನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮ ಎಂಬುದು ದೇವಸ್ಥಾನ, ಮಠ, ಮಂದಿರಗಳಿಗಷ್ಟೇ ಸೀಮಿತವಾಗಿರಬಾರದು, ಮನೆಯೊಳಗೂ ಆಚರಣೆಯಾಗಬೇಕು. ದೇವರ ಪ್ರಸಾದದ ಜೊತೆಗೆ ಧರ್ಮವನ್ನು ಮನೆಗೆ ಕೊಂಡು ಹೋಗಿ ಮನೆ ಧರ್ಮಸ್ಥಾನವಾಗಬೇಕು ಎಂದರು. ಇಲ್ಲಿ ಶಂಕರ- ನಾರಾಯಣರು ಒಂದೇ ಬಿಂಬದಲ್ಲಿರುವಾಗ ನಾವ್ಯಾಕೇ ಒಂದೇ ಆಗಬಾರದು ಎಂದ ಶ್ರೀಗಳು ಬ್ರಹ್ಮಕಲಶ ಮೂಲಕ ನಾವು ಒಗ್ಗಟ್ಟಿನ ಪಾಠ ಕಲಿತು ನಮ್ಮ ಸಂಸ್ಕೃತಿ, ನಮ್ಮ ಧರ್ಮ ರಕ್ಷಣೆಯ ಕಾರ್ಯ ಮಾಡೋಣ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಜಗತ್ತು ವಿನಾಶದ ಕಡೆಗೆ ಹೋಗದಂತೆ ಬದುಕು ಹಸನಾಗಲು ಹಿಂದು ಧರ್ಮ ಬೇಕು ಎಂದರು. ಹಿಂದು ಸಮಾಜದಲ್ಲಿರುವ ಗಟ್ಟಿತನವನ್ನು ಜೋಡಿಸಲು ಬ್ರಹ್ಮಕಲಶೋತ್ಸವ ಎಂಬುದು ನೆಪ. ಮನಸ್ಸಿನ ಕೊಳೆಯನ್ನು ತೆಗೆಯಲು ಉತ್ಸವಗಳು ನಡೆಯುತ್ತಿವೆ ಎಂದರು. ಧಾರ್ಮಿಕ, ಸಾಂಸ್ಕೃತಿಕ ಸ್ವಾತಂತ್ರ್ಯ ನಮಗೆ ಇನ್ನೂ ದೊರಕಿಲ್ಲ, ಇದಕ್ಕೆ ಹಿಂದುಗಳೇ ಕಾರಣರು ಎಂದರು. ನಮ್ಮ ದೇವರ ಬಗ್ಗೆ ನಮಗೇ ಸಂಶಯ ಮೂಡುವ ಸ್ಥಿತಿ ನಿರ್ಮಾಣವಾಗಿದೆ, ಹೊಸ ಮನೆ ಕಟ್ಟುವಾಗ ಹೋಮ್ ಥಿಯೇಟರ್ ಮಾಡ್ತೇವೆ, ದೇವರ ಕೋಣೆ ಮಾಡುತ್ತಿದ್ದೇವಾ ? ಎಂದು ಪ್ರಶ್ನಿಸಿದರು.
ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ವಹಿಸಿದ್ದರು. ದೇವಸ್ಥಾನಕ್ಕೆ ಬರಲು ವ್ಯವಸ್ಥಿತವಾದ ರಸ್ತೆ ನಿರ್ಮಿಸಲು ೧೦ ಕೋಟಿ ನಿಗದಿಯಾಗಿದ್ದು, ಇನ್ನೂ ಹೆಚ್ಚಿನ ಅನುದಾನ ನಿಗದಿಗೊಳಿಸಲಾಗುವುದು ಎಂದರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸುವ ಅಗತ್ಯವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಆಗಲು ನೆರವು ನೀಡುವುದಾಗಿ ಹೇಳಿದರು. ಬಂಟ್ವಾಳ ಕ್ಷೇತ್ರದಲ್ಲಿ ಧಾರ್ಮಿಕ ಕ್ಷೇತ್ರ ಸಂಪರ್ಕಿಸುವ ೨೩೨ ರಸ್ತೆಗಳ ಅಭಿವೃದ್ಧಿ ಆಗಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಉದ್ಯಮಿ ವಿನಯಪ್ರಕಾಶ್ ಸಿಂಗ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಉದ್ಯಮಿ ರವೀಂದ್ರನಾಥ ಶೆಟ್ಟಿ ಪುಣ್ಕೆಮಜಲು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ, ಉದ್ಯಮಿ ರಘುನಾಥ ಸೋಮಯಾಜಿ, ಏಕನಾಥೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಉದ್ಯಮಿ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನದಾಸ್ ಹಿರಿಯಡ್ಕ, ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್, ಉದ್ಯಮಿ ಮೋಹನ ಶೆಟ್ಟಿ ಮುಂಬೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಯಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಳಂದಿಲ, ಕಾರ್ಯಾಧ್ಯಕ್ಷ ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಆರ್ಥಿಕ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ನಂದಾವರ ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಜಿ. ಶೆಟ್ಟಿ ದಳಂದಿಲ ಸ್ವಾಗತಿಸಿದರು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ ಪ್ರಾಸ್ತವಿಕವಾಗಿ ಮಾತನಾಡಿದರು. ಸ್ವಾಘತ ಸಮಿತಿ ಸಂಚಾಲಕ ಜಯಶಂಕರ ಬಾಸ್ರಿತ್ತಾಯ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ದೇವಾಡಿಗ, ಗಟ್ಟಿ ಸಮಾಜ, ಜನಸೇವಾ ಟ್ರಸ್ಟ್ ಸಹಿತ ವಿವಿಧ ಸಂಘ, ಸಂಸ್ಥೆ, ದಾನಿಗಳನ್ನು ಗೌರವಿಸಲಾಯಿತು.