ಬಂಟ್ವಾಳ: ನಾನು ಶ್ರೇಷ್ಠ ಎನ್ನುವ ಪೈಪೋಟಿ ಬಿಟ್ಟು ಹೊಂದಾಣಿಕೆ, ಸಾಮರಸ್ಯದಿಂದ ಬದುಕುವುದೇ ಮದುವೆಯ ಸಾರ ಎಂದು ಪುತ್ತೂರು ಶ್ರೀವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಬಂಟ್ವಾಳ ಬೈಪಾಸ್ ನಿತ್ಯಾನಂದ ನಗರ ಶ್ರೀಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ ನ ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಶುಕ್ರವಾರ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ದೇಶದ ಆತ್ಮವಿದ್ದಂತೆ, ಧರ್ಮದ ಆಚರಣೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ ಕಾರ್ಯ ಆಗಬೇಕಾಗಿದೆ ಎಂದರು. ಸಾಮೂಹಿಕ ವಿವಾಹದ ಮೂಲಕ ಆಗುವ ಸರಳ ವಿವಾಹ ತ್ಯಾಗದ ಜೀವನಕ್ಕೂ ಪ್ರೇರಣೆ ಎಂದರು.ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ,ಮುಂಬೈ ಗಣೇಶ್ ಪುರಿ ಶ್ರೀನಿತ್ಯಾನಂದ ಸ್ವಾಮಿ ಸಮಾಧಿ ಮಂದಿರದ ಪ್ರಧಾನ ಅರ್ಚಕ ನಂದು ಮಹಾರಾಜ್,ಹಿಮಾಚಲ ಪ್ರದೇಶದ ವಿಜಯಾನಂದ ಮಹಂತ್ ಸರಸ್ವತಿ ಸ್ವಾಮೀಜಿ, ಕಾಂಞಗಾಡ್ ಗುರುವನ ಶ್ರೀವಿದ್ಯಾನಂದ ಭಾರತಿ ಸ್ವಾಮೀಜಿ,ಉಡುಪಿ ಶ್ರೀ ರಾಜರಾಜೇಶ್ವರೀ ಸಂಸ್ಥಾನದ ವಿಶ್ವಾಧೀ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮುಂಬೈಯ ಉದ್ಯಮಿ,ಸಮಾಜಿಕ ಕಾರ್ಯಕರ್ತ ಬಾಲಕೃಷ್ಣ ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಂಬೈ ಹೆರಂಬಾ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸದಾಶಿವ ಕೆ.ಶೆಟ್ಟಿ,ಸಕಲೇಶಪುರ ಉದ್ಯಮಿ ಸದಾಶಿವ ಭಂಡಾರಿ,ಮುಂಬೈ ಮುಲುಂಡು ಪೆರಕ್ಸ್ ಇಂಡಿಯ ಪಿ.ಲಿ.ನ ಸಿಎಂಡಿ ಅಶೋಕ್ ಭಂಡಾರಿ,ಮುಂಬೈಯ ಸದಾಶಿವ ಭಂಡಾರಿ,ಬಿಜಾಪುರದ ಉದ್ಯಮಿ ಶ್ರೀಧರ ಕೋಟ್ಯಾನ್, ಚಲನಚಿತ್ರ ನಟ ಶಾನಿಲ್ ಗುರು,ವಿ.ಹಿಂ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಮಾಜಿ ಸಚಿವ, ಕಾಂಞಗಾಡ್ ಶ್ರೀ ನಿತ್ಯಾನಂದ ಆಶ್ರಮದ ಟ್ರಸ್ಟಿ ಬಿ. ನಾಗರಾಜ ಶೆಟ್ಟಿ ,ಮಂದಿರದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಉದಯಕುಮಾರ್ ರಾವ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಿ.ಹರೀಶ್ ಶೆಟ್ಟಿ,ಮಂದಿರ ಆಡಳಿತ ಸಮಿತಿ ಗೌರವಾಧ್ಯಕ್ಷ ಸುರೇಶ್ ಕುಲಾಲ್,ಪುರಸಭಾ ಸದಸ್ಯೆ ದೇವಕಿ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ದಿನೇಶ್ ಭಂಡಾರಿ ದಂಪತಿಯನ್ನು ಸನ್ಮಾನಿಸಲಾಯಿತು.
ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ದಿನೇಶ್ ಭಂಡಾರಿ ಸ್ವಾಗತಿಸಿದರು, ರಾಮದಾಸ ಬಂಟ್ವಾಳ ವಂದಿಸಿದರು, ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 8 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.