
ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ವತಿಯಿಂದ ನಡೆಯುವ ಶನಿವಾರದ ಸಂತೆಗೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಮಾಜಿ ಸಚಿವ ರಮಾನಾಥ ರೈ, ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಪ್ರಾಸ್ತಾವಿಕವಾಗಿ ಮಾತಾನಾಡಿ ಹಲವು ವರ್ಷಗಳಿಂದ ಬಂಟ್ವಾಳದಲ್ಲಿ ನಿಂತು ಹೋಗಿದ್ದ ಸಂತೆಯನ್ನು ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಮೂಲಕ ಪುನಾರಂಭಿಸಲಾಗಿದೆ. ಈಗಾಗಲೇ ನಮ್ಮ ಲೆಕ್ಕಚಾರಕ್ಕಿಂತಲೂ ಹೆಚ್ಚಿನ ವ್ಯಾಪಾರಿಗಳು ಸಂತೆಯಲ್ಲಿ ವ್ಯಾಪಾರಕ್ಕೆ ನೋಂದಣಿ ಮಾಡಿಸಿಕೊಂಡಿರುವುದು ಸಂತಸ ತಂದಿದೆ. ಗ್ರಾಹಕರಿಗೆ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಉದ್ದೇಶದಿಂದ ಸಂತೆ ಆರಂಭಿಸಲಾಗಿದೆ ಎಂದರು.
ಶನಿವಾರ ಸಂತೆ ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಯಶಸ್ವಿಯಾಗಿ ನಡೆಯುತ್ತಿದೆ. ಬಂಟ್ವಾಳದಲ್ಲಿ ಎಪಿಎಂಸಿಯ ಸಮಿತಿ ಇದೆ ಆದರೆ ಮಾರುಕಟ್ಟೆ ಇಲ್ಲ. ದ.ಕ. ಜಿಲ್ಲೆಯಲ್ಲಿ ಇರುವ ಮಾರುಕಟ್ಟೆಗಳು ಪ್ರಭಾವಶಾಲಿಯಾಗಿಲ್ಲ. ರೈತರಿಗೆ ಹಾಗೂ ವ್ಯಾಪರಿಗಳಿಗೆ ಸಾಮಾಗ್ರಿಗಳನ್ನು ಮಾರಲು ನಿರ್ದಿಷ್ಟ ವಾದ ಮಾರಾಟ ಕೇಂದ್ರದ ವ್ಯವಸ್ಣೆ ಇಲ್ಲ. ಇಂದು ಬಂಟ್ವಾಳದಲ್ಲಿ ಶುಭಾರಂಭಗೊಂಡ ಸಂತೆ ಇದಕ್ಕೊಂದು ಉತ್ತರವಾಗಲಿದೆ ಎಂದರು.
ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಮಾತನಾಡಿ ಈ ವರ್ಷ ಮಳೆ ಕಡಿಮೆಯಾಗಿದೆ. ಕೃಷಿಗೆ ಹೊಡೆತ ಬಿದ್ದಿದೆ. ಈ ನಡುವೆ ಕೃಷಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಂತೆ ಪುನಾರಂಭ ಮಾಡಿದ್ದು ಉತ್ತಮ ಕಾರ್ಯ ಎಂದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ ಕಡಿಮೆ ದರದಲ್ಲಿ ವಸ್ತುಗಳು ಸಿಗುತ್ತವೆ ಎನ್ನುವ ಕಾರಣಕ್ಕೆ ಗ್ರಾಹಕರು ಸಂತೆಗೆ ಬರುತ್ತಾರೆ. ಇಲ್ಲಿಯೂ ಗ್ರಾಹಕರಿಗೆ ಕಡಿಮೆ ದರಕ್ಕೆ ವಸ್ತುಗಳು ಸಿಕ್ಕಾಗ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸಂತೆಗೆ ಬರಲಿದ್ದಾರೆ ಎಂದು ತಿಳಿಸಿದರು.

ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಕಾರಿಂಜೇಶ್ವರ ದೇವಸ್ಥಾನ ಮಾಜಿ ಅಧ್ಯಕ್ಷ ಜಿನರಾಜ ಆರಿಗ, ಜಿ.ಪಂ ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಜಯಂತ್ ನಾಯಕ್
ಶರ್ವಾಣಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷೆ ರೋಹಿಣಿ ಉದಯ್, ಜೈನ್ ಮಿಲನ್ ಅಧ್ಯಕ್ಷ ರಾಜೇಂದ್ರ ಜೈನ್ ಮತ್ತಿತರರು ಶುಭ ಹಾರೈಸಿದರು
ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಶುಭ ಹಾರೈಸಿದರು.
ಪ್ರಮುಖರಾದ ನಾಗೇಶ್ ಕಲ್ಲಡ್ಕ, ಮಲ್ಲಿಕಾ ವಿ.ಶೆಟ್ಟಿ, ಅಶೋಕ್ ಶೆಟ್ಟಿ ಸರಪಾಡಿ, ಪದ್ಮಶೇಖರ್ ಜೈನ್,, ಹರಿಪ್ರಸಾದ್ ಭಂಡಾರಿಬೆಟ್ಟು, ಎಚ್ಕೆ ನಯನಾಡು
ಕಿಶೋರ್ ಆಚಾರ್ಯ, ಅರ್ಕಕೀರ್ತಿ ಇಂದ್ರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು, ನಿರ್ದೇಶಕರಾದ ಸುಧಾಕರ ಸಾಲ್ಯಾನ್ ವಂದಿಸಿದರು. ಡಾ. ಸುದೀಪ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರು, ಸಿಬ್ಬಂದಿಗಳು ಭಾಗವಹಿಸಿದ್ದರು.
ತರಕಾರಿ, ಹಣ್ಣ ಹಂಪಲು, ಫ್ಯಾನ್ಸಿ, ಸಾವಯವ ವಸ್ತುಗಳು, ಖಾದಿ, ಜವಳಿ, ಆಹಾರ ವಸ್ತುಗಳ ಸ್ಟಾಲ್ ಗಳು ಮತ್ತಿತರ ಮಳಿಗೆಗಳು ಸಂತೆಯಲ್ಲಿದ್ದವು. ಬೆಳಗ್ಗೆ 9ರಿಂದ ರಾತ್ರಿ 8ವರೆಗೆ ಪ್ರತೀ ಶನಿವಾರ ಸಂತೆ ನಡೆಯಲಿದೆ. ಸ್ಥಳೀಯರ ವ್ಯಾಪಾರ, ವಹಿವಾಟು ಉತ್ತೇಜನ ಹಾಗೂ ಸಾರ್ವಜನಿಕರಿಗೆ ಎಲ್ಲ ವಸ್ತುಗಳೂ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸಂತೆ ನಡೆಯಲಿದೆ
Advertisement







