
ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2025/26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ರವಿವಾರ ಸಜೀಪಮೂಡ ಸುಭಾಷ್ ನಗರದ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ನಡೆಯಿತು.
ಅಧ್ಯಕ್ಷರಾದ ಕೆ.ಸಂಜೀವ ಪೂಜಾರಿ ಅವರು ಮಾತನಾಡಿ ಎರಡು ದಶಕಗಳ ಹಿಂದೆ ಮೂರ್ತೆದಾರರ ಶ್ರೇಯೋಭಿವೃದ್ದಿಯ ಉದ್ದೇಶದಿಂದ ಹುಟ್ಟಿಕೊಂಡ ನಮ್ಮ ಸಹಕಾರಿ ಸಂಸ್ಥೆಯು 2026ರ ಆರ್ಥಿಕ ವರ್ಷದಲ್ಲಿ 18 ಶಾಖೆಗಳನ್ನು ಹೊಂದಿ ಯಶಸ್ವಿಯಾಗಿ ಕಾರ್ಯ ನಡೆಸುತ್ತಿದೆ. 18523 ಸದಸ್ಯರನ್ನು ಹೊಂದುವ ಮೂಲಕ ಕಳೆದ ಸಾಲಿನಲ್ಲಿ 395,49,75,346.49 ರೂ. ವ್ಯವಹಾರವನ್ನು ಮಾಡಿ 34,80,251.51 ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.25 ಡಿವಿಡೆಂಟ್ ನೀಡುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಗರಿಷ್ಠ ಲಾಭವನ್ನು ಸದಸ್ಯರಿಗೆ ಹಂಚಿದ ಗ್ರಾಮೀಣ ಭಾಗದ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
1991ರಲ್ಲಿ ಮೂರುವವನೇ ಮಾರುವವ ಆಂದೋಲನ ನಡೆದಿತ್ತು. ಬೇರೆ ಬೇರೆಯಾಗಿದ್ದ ಶೇಂದಿ ಮಾರಾಟಗಾರರನ್ನು ಒಗ್ಗೂಡಿಸಿ 2005 ರಲ್ಲಿ ಆರ್ಥಿಕ ಸಂಸ್ಥೆಯಾಗಿ ಸಹಕಾರಿಯ ರೂಪ ಪಡೆಯಿತು. ಸಹಕಾರಿ ಸಂಘವು ಕಳೆದ 21 ವರ್ಷಗಳಿಂದ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ 18 ಶಾಖೆಗಳನ್ನು ಹೊಂದುವ ಮೂಲಕ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘದ ಎಲ್ಲಾ ಸಿಬಂದಿಗಳು ಮಹಿಳೆಯರೇ ಆಗಿದ್ದು ವಾರ್ಷಿಕ ಶೇ.100 ಸಾಲ ವಸೂಲಾತಿಯೊಂದಿಗೆ ಸಂಘದಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನೆಲೆಯಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸತತವಾಗಿ ಸಾಧನಾ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿದೆ ಎಂದರು.

ಸುದ್ದಿಸಂಸ್ಥೆಯಿಂದ “ಕರ್ನಾಟಕ ಐಡಲ್” ಪ್ರಶಸ್ತಿ ಪುರಸ್ಕೃತರಾದ ಕೆ.ಸಂಜೀವ ಪೂಜಾರಿ ಅವರನ್ನು ಸಂಘದ ಆಡಳಿತ ಮಂಡಳಿ ವತಿಯಿಂದ ಸಮ್ಮಾನಿಸಲಾಯಿತು.
ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮುಖ್ಯ ಅತಿಥಿಗಳಾಗಿದ್ದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಜಿ. ವಾರ್ಷಿಕ ವರದಿ ಮಂಡಿಸಿದರು.
ಯಕ್ಷಗಾನ ಕಲಾವಿದ ಕಡಬ ದಿನೇಶ್ ರೈ ಅವರನ್ನು ಸಮ್ಮಾನಿಸಲಾಯಿತು. ಸಂಘದ ಮೂರ್ತೆದಾರರ ಸದಸ್ಯರನ್ನು ಗೌರವಿಸಲಾಯಿತು. ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಾಡ, ನಿರ್ದೇಶಕರಾದ ಸುಂದರ ಪೂಜಾರಿ, ರಮೇಶ್ ಅನ್ನಪ್ಪಾಡಿ, ಜಯಶಂಕರ ಕಾನ್ಸಾಲೆ, ಕೆ. ಸುಜಾತ ಎಂ., ಆಶಿಶ್ ಪೂಜಾರಿ, ಚಿದಾನಂದ ಎಂ.ಕಡೇಶ್ವಾಲ್ಯ, ಉಪಸ್ಥಿತರಿದ್ದರು.
ನಿರ್ದೇಶಕರಾದ ವಾಣಿ ವಸಂತ ಸ್ವಾಗತಿಸಿದರು, .ಎಂ.ಕೆ. ಪ್ರಸಾದ್ ವಂದಿಸಿದರು, ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.
Advertisement







