
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ವಾರ್ಡನ್ ಆಗಿ ಚಿರಪರಿಚಿತರಾಗಿದ್ದ ಡ್ರೈವಿಂಗ್ ತರಬೇತುದಾರ ಅಬ್ದುಲ್ ರಹಿಮಾನ್ ಪಟೇಲ್ (65) ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೆಲವು ವರ್ಷಗಳ ಕಾಲ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದ ಇವರು ಊರಿಗೆ ಮರಳಿದ ಬಳಿಕ ಬಿ.ಸಿ.ರೋಡಿನ ಡ್ರೈವಿಂಗ್ ಸಂಸ್ಥೆಯಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ಬಿಡುವಿನ ವೇಳೆಯಲ್ಲಿ ಬಿ.ಸಿ.ರೋಡು, ಕೈಕಂಬ ಪರಿಸರದಲ್ಲಿ ಟ್ರಾಫಿಕ್ ವಾರ್ಡನ್ ಸೇವೆ ನೀಡುತ್ತಿದ್ದರು. ಇವರ ಈ ಸೇವಾಕಾರ್ಯ ಸಾರ್ವಜನಿಕ ಕ್ಷೇತ್ರದಲ್ಲಿ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಆ ಸಮಯದಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ವರದಾನವಾಗಿತ್ತು. ಬಳಿಕ ಅನಾರೋಗ್ಯಕ್ಕೆ ತುತ್ತಾದ ಅವರು ಪರ್ಲಿಯಾ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಬ್ದುಲ್ ರಹಿಮಾನ್ ಪಟೇಲ್ ಅವರ ಸೇವಾ ಕಾರ್ಯಕ್ಕೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದವು.


Advertisement







