ಬಂಟ್ವಾಳ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚgಣಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾಕ್ಷೇತ್ರ ಇದರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮ ಶುಕ್ರವಾರ ಬಿ.ಸಿ.ರೋಡಿನ ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು.

ತಹಶಿಲ್ದಾರ್ ಜಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ವಜ್ಞನ ತ್ರಿಪದಿಗಳ ಸಾರ ಇಂದಿನ ಯುವ ಸಮುದಾಯಕ್ಕೆ ತಿಳಿದಿಲ್ಲ. ಸರ್ವಜ್ಞನ ವಿಚಾರಧಾರೆಗಳನ್ನು ಶಾಲಾ ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸರ್ವಜ್ಞನ ವಿಚಾರಧಾರೆ ಇಡೀ ಮಾನವ ಸಮುದಾಯಕ್ಕೆ ತಲುಪಬೇಕಾಗಿದೆ. ಸರ್ವಜ್ಞ ಜಯಂತಿ ಆಚರಣೆಯಲ್ಲಿ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಳ್ಳಬೇಕು. ಆ ಮೂಲಕ ಯುವ ಸಮುದಾಯಕ್ಕೆ ಶ್ರೇಷ್ಠ ವ್ಯಕ್ತಿಗಳ ವಿಚಾರಧಾರೆ ತಲುಪಬೇಕು ಎಂದು ತಿಳಿಸಿದರು.


ಫರಂಗಿಪೇಟೆ ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯಸ್ಥ ದೇವದಾಸ್ ಕೊಡ್ಮಾಣ್ ಉಪನ್ಯಾಸ ನೀಡಿ ಸರ್ವಜ್ಞನ ತ್ರಿಪದಿ ಸಾರ್ವಕಾಲಿಕ ಸತ್ಯವಾಗಿದೆ. ಸರ್ವಜ್ಞ ಜಯಂತಿ ಆಚರಣೆಯ ಮೂಲಕ ಅವರ ತ್ರಿಪದಿಗಳನ್ನು ಅರ್ಥೈಸಿಕೊಂಡು ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರೀಕರಾಗಬೇಕೆಂದು ತಿಳಿಸಿದರು. ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶೇಷಪ್ಪ ಮಾಸ್ತರ್ ಶುಭ ಹಾರೈಸಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ, ರಾಜ್ಯ ಕುಲಾಲ ಕುಂಬಾರ ಮಹಿಳಾ ಸಂಘದ ಬಂಟ್ವಳ ಘಟಕದ ಅಧ್ಯಕ್ಷೆ ವಸಂತಿ ಭೋಜ ಸಾಲ್ಯಾನ್, ಕುಲಾಲ ಯುವ ವೇದಿಕೆ ಅಧ್ಯಕ್ಷ ಸುಮಿತ್ ಸಾಲ್ಯಾನ್ ಸೊರ್ನಾಡು, ಮಹಿಳಾ ಸಂಚಾಲಕಿ ದುರ್ಗಾಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ್ ಮಿತ್ತೂರು, ಉಪತಹಶೀಲ್ದಾರ್ ದಿವಾಕರ್ ಮುಗುಳ್ಯ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಬೂಡ ಸದಸ್ಯ ಮನೋಹರ್ ನೇರಂಬೋಳು, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು, ಕುಲಲ ಕುಂಬಾರ ಯುವ ವೇದಿಕೆಯ ಕಾರ್ಯದರ್ಶಿ ಜಯಗಣೇಶ್ ಬಂಗೇರ, ನಿಕಟಪೂವಾರ್ಧಕ್ಷ ನಿತೇಶ್ ಪಲ್ಲಿಕಂಡ, ಕುಲಾಲ ಸಂಘದ ಸದಸ್ಯರಾದ ಮಚ್ಚೇಂದ್ರ ಸಾಲ್ಯಾನ್, ಸತೀಶ್ ಸಂಪಾಜೆ, ಮಾಧವ ಕುಲಾಲ್, ಮಾಜಿ ಅಧ್ಯಕ್ಷ ನಾರಾಯಣ ಸಿ.ಪೆರ್ನೆ ಮತ್ತಿತರರು ಭಾಗವಹಿಸಿದ್ದರು.
ಕಂದಾಯ ಇಲಾಖೆಯ ಜನಾರ್ದನ್ ಸ್ವಾಗತಿಸಿದರು. ಕುಲಾಲ ಕುಂಬಾರ ಯುವವೇದಿಕೆಯ ವಿಭಾಗೀಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ವಂದಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.

Advertisement







