
ಬಂಟ್ವಾಳ: ತುಳುನಾಡಿನಲ್ಲಿ ದಿನ ಬಳಕೆಯ ವಸ್ತುಗಳಾಗಿ ಜನಮಾನಸದಲ್ಲಿ ಬೆರೆತು ಪ್ರಸುತ ಪ್ಲಾಸ್ಟಿಕ್, ಸ್ಟೀಲ್, ವಸ್ತುಗಳ ಭರಾಟೆಯಿಂದಾಗಿ ತೆರೆಮರೆಗೆ ಸರಿದಿರುವ ಹಿರಿಯರ ಕಾಲದ ಹಳೆಯ ವಸ್ತುಗಳ ಪ್ರದರ್ಶನವನ್ನು ಬಂಟ್ವಾಳ ತಾಲೂಕಿನ ಫರ್ಲಾ ವೆಲಂಕಣಿ ಆರೋಗ್ಯಮಾತಾ ಚರ್ಚಿನಲ್ಲಿ ಹಮ್ಮಿಕೊಳ್ಳಾಗಿದ್ದು, ತುಳುನಾಡಿನ ಜನರ ಬದುಕನ್ನು ಅನಾವರಣಗೊಳಿಸಿತು. ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಯುವ ಸಮುದಾಯಕ್ಕೆ ತಮ್ಮ ಹಿರಿಯರ ಜೀವನವನ್ನು ನೆನೆಪಿಸಿದರೆ, ಹಿರಿಯರಿಗೆ ತಮ್ಮ ಬಾಲ್ಯ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.
ಫರ್ಲಾ ವೆಲಂಕಣಿ ಆರೋಗ್ಯಮಾತಾ ದೇವಾಲಯದ ವತಿಯಿಂದ ಚರ್ಚಿನ 9 ವಾರ್ಡ್ ಗಳಲ್ಲಿರುವ ಸದಸ್ಯರಿಗೆ ನಮ್ಮ ಹಿರಿಯರು ದಿನೋಪಯೋಗಿ ವಸ್ತುಗಳಾಗಿ ಬಳಸಿದ ಪರಿಕರಗಳನ್ನು ಸಂಗ್ರಹಿಸಿ, ಚರ್ಚಿನ ಸಭಾಂಗಣದಲ್ಲಿ ಪ್ರರ್ದಶನಕ್ಕಿಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 9 ವಾರ್ಡ್ ಗಳ ಮನೆಯಿಂದ ನೂರಾರು ಹಳೆಯ ವಸ್ತುಗಳು ಸಂಗ್ರಹಗೊಂಡವು. ಅವುಗಳನ್ನು ಚರ್ಚ್ ಸಭಾಂಗಣದಲ್ಲಿ ಸುಂದರವಾಗಿ ಜೋಡಿಸಿಟ್ಟು, ಪ್ರತೀ ವಸ್ತುಗಳ ಹೆಸರು, ಅದರ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.



ಮಣ್ಣಿನಿಂದ ತಯಾರಿಸಿದ ಹಾಗೂ ಹಿತ್ತಾಳೆಯ ಅಡಿಗೆ ಮನೆಯ ಪರಿಕರಗಳು, ಕೃಷಿ ಬಳಕೆಯ ಸಾಮಾಗ್ರಿಗಳು, ವೃತ್ತಿ ಪರಿಕರಗಳು, ರೇಡಿಯೋ, ಟೇಪ್ ರೆಕಾರ್ಡರ್, ಕ್ಯಾಮರ, ವಿಸಿಆರ್, ಟೆಲಿಪೋನ್, ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳು, ಬಗೆಬಗೆಯ ಗ್ಯಾಸ್ ಲೈಟ್, ಸ್ಟೌ, ಟೈಪ್ ರೈಟರ್, ತೂಕ ಮಾಪಕ, ನೇಯ್ಗೆ ಬುಟ್ಟಿಗಳು, ನಾಣ್ಯಗಳು ವಿಶೇಷವಾಗಿ ಗಮನ ಸೆಳೆಯಿತು.

ಅರಿವು ಮೂಡಿಸುವ ಕಾರ್ಯಕ್ರಮ:
ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್. ಮಾರ್ಕ್ ಡಿಸೋಜಾ ವಿ4 ನ್ಯೂಸ್ ನೊಂದಿಗೆ ಮಾತನಾಡಿ
ನಮ್ಮ ಹಿರಿಯರ ಜೀವನದ ಬಗ್ಗೆ ಇಂದಿನ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಚರ್ಚಿನ ಐಸಿವೈಎಂ ಹಾಗೂ ಯುವ ಆಯೋಗ ಫರ್ಲಾ ಘಟಕ ಸಹಯೋಗದೊಂದಿಗೆ ಹಮ್ಮಿಕೊಳ್ಳಾಗಿದೆ ಎಂದು ತಿಳಿಸಿದರು. ನಮ್ಮ ಹಿರಿಯರು ಹೇಗೆ ಬದುಕಿದ್ದರು, ಅವರು ಆ ಕಾಲದಲ್ಲಿ ಯಾವ ವಸ್ತುಗಳನ್ನು ದಿನ ಬಳಕೆಗೆ ಉಪಯೋಗಿಸಿದ್ದರು ಎನ್ನುವ ಬಗ್ಗೆ ಕಿರಿಯರಿಗೆ ಅರಿವು ಮೂಡಿಸಿದರೆ ಹಿರಿಯರಿಗೆ ತಮ್ಮ ಬಾಲ್ಯದ ದಿನಗಳನ್ನು ನೆನೆಪು ಮಾಡಿಸಿದೆ ಎಂದರು.
ಫರ್ಲಾ ಚರ್ಚಿನ ವಂದನೀಯ ಗಿಲ್ಬರ್ಟ್ ಮಸ್ಕರೇನಸ್, ಹಾಗೂ ಹಿರಿಯ ಕೃಷಿಕ ಹೆನ್ರಿ ಮೊಂತೆರೋ ತೊಡಂಬಿಲ ಸ್ಪರ್ಧೆಯ ತೀರಗಪುಗಾರರಾಗಿ ಭಾಗವಹಿಸಿದ್ದರು.


Advertisement







