
ಬಂಟ್ವಾಳ: ಕಲೆಯೆಂಬುದು ದೇವರ ವರ. ಕಲೆ ಸಾಂಸ್ಕೃತಿಕವಾಗಿ ಊರನ್ನು ಬೆಳಗುತ್ತದೆ. ಶಿಕ್ಷಣದ ಜೊತೆಗೆ ವಿವಿಧ ಕಲೆಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯವಿದೆ ಎಂದು ಪುತ್ತೂರು ವಿಶ್ವ ಕಲಾನಿಕೇತನ ಆರ್ಟ್ ಆಂಡ್ ಕಲ್ಚರಲ್ ಇನ್ಸ್ಟಿಟ್ಯೂಷನ್ ಇಲ್ಲಿನ ನೃತ್ಯಗುರು ಕರ್ನಾಟಕ ಕಲಾಶ್ರೀ ಪುರಸ್ಕೃತೆ ವಿದುಷಿ ನಯನ ವಿ.ರೈ ಕುದ್ಕಾಡಿ ಹೇಳಿದರು.
ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದೊಂದಿಗೆ ಶನಿವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ನೃತ್ಯಧಾರಾ ಮತ್ತು ಯಕ್ಷಗಾನ ಹಾಸ್ಯ ಕಲಾವಿದ ಕೀರ್ತಿಶೇಷ ರಸಿಕರತ್ನ ನಯನಕುಮಾರ್ ಸ್ಮರಣಾರ್ಥ ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭರತನಾಟ್ಯ ಕಲೆಗೆ ಅವಕಾಶಗಳೊಂದಿಗೆ ಪ್ರೋತ್ಸಾಹಗಳು ದೊರಕುತ್ತಿದ್ದು, ಸಾಂಸ್ಕೃತಿಕವಾಗಿ ನಮ್ಮ ಬೆಳವಣಿಗೆಗೆ ಇದು ಪೂರಕವಾಗಿದೆ. ಈ ನಿಟ್ಟಿನಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಶುಭ ಹಾರೈಸಿದರು.


ಕಲಾನಯನ ಪ್ರಶಸ್ತಿಯನ್ನು ಸಂಶೋಧಕ, ವಿಶ್ರಾಂತ ಪ್ರಾಧ್ಯಾಪಕ ಡಾ. ವೈ.ಉಮಾನಾಥ ಶೆಣೈ ಅವರಿಗೆ ನೀಡಿ ಗೌರವಿಸಲಾಯಿತು. ಶೆಣೈ ಅವರ ಪತ್ನಿ ನಿವೃತ್ತ ಅಧಿಕಾರಿ ವಿಜಯಕುಮಾರಿ ಶೆಣೈ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ವೈ.ಉಮಾನಾಥ ಶೆಣೈ, ನಮ್ಮ ಕಲೆ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಭರತನಾಟ್ಯ ಕಲಿಕೆಗೆ ವಿದ್ಯಾರ್ಥಿಗಳನ್ನು ಪೋಷಕರು ಕಳುಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಬೆಳಕು ವಿನ್ಯಾಸಕಾರ ಪೃಥ್ವಿನ್ ಕೆ. ಉಡುಪಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನೃತ ನಿರ್ದೇಶಕಿ ರೋಹಿಣಿ ಉದಯ್ ಅವರ ಶಿಷ್ಯೆಯರು ಗುರು ಕಾಣಿಕೆ ಸಮರ್ಪಿಸಿದರು.
ಸಂಚಾಲಕ ಉದಯ ವೆಂಕಟೇಶ ಭಟ್ ಸ್ವಾಗತಿಸಿ ಸನ್ಮಾನಿತರ ಪರಿಚಯ ಮಾಡಿದರು. ನೃತ್ಯನಿರ್ದೇಶಕಿ ರೋಹಿಣಿ ಉದಯ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಾಗೂ ಬಳಿಕ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ನಡೆಯಿತು. ನಟುವಾಂಗದಲ್ಲಿ ರೋಹಿಣಿ ಉದಯ್, ಹಾಡುಗಾರಿಕೆಯಲ್ಲಿ ಶರತ್ ಮಂಗಳೂರು, ವಿದುಷಿ ಡಾ. ಗಾನ ಪಿಲಿಂಜ, ಮೃದಂಗದಲ್ಲಿಬ ವಿದ್ವಾನ್ ಬಾಲಚಂದ್ರ ಭಾಗವತ್ ಉಡುಪಿ, ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ ಆಚಾರ್ಯ ಪುಂಜಾಲಕಟ್ಟೆ, ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು ಸಹಕರಿಸಿದರು.

Advertisement







