
ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಶ್ರಾವಣದಲ್ಲಿ ಒಂದು ದಿನ ವಿಶೇಷ ಕಾರ್ಯಕ್ರಮ ಬಂಟ್ವಾಳ ಅಜೆಕಲದ ವಿಶ್ವಕರ್ಮ ಸಭಾಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ದೀಪ ನಮಸ್ಕಾರ ಪೂಜೆ, ವಿವಿಧ ಮನೋರಂಜನಾ ಆಟಗಳು, ಶ್ರಾವಣ ಮಾಸದ ಪ್ರವಚನ, ಸಭಾ ಕಾರ್ಯಕ್ರಮ, ವಿವಿಧ ಖಾದ್ಯಗಳ ಸಜ ಭೋಜನ, ನೃತ್ಯ ಮೊದಲಾದ ವಿಶೇಷ ಕಾರ್ಯಕ್ರಮಗಳೊಂದಿಗೆ ಸಂಪನ್ನ ಗೊಂಡಿತು.

ಸಭಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ರತ್ನಾವತಿ ಜೆ. ಆಚಾರ್ಯ ಬೈಕಾಡಿ ಉದ್ಘಾಟಿಸಿದರು. ಬಳಿಕ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು ತುಳುನಾಡಿನಲ್ಲಿ ನಾವು ನಮ್ಮ ಪರಂರಪೆರಯಿಂದ ಬಂದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಅವುಗಳನ್ನು ನಮ್ಮ ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನ ಮಾಡಬೇಕಾಗಿದೆ. ನಮ್ಮದೇಶದಲ್ಲಿ ಹಬ್ಬಗಳು ಪ್ರಧಾನ. ಶ್ರಾವಣ ಮಾಸದಲ್ಲಿ ಹಬ್ಬಗಳು ತುಂಬಾ ವಿಶೇಷವಾಗಿದೆ. ಶ್ರಾವಣವನ್ನು ಶಿವನ ಆರಾಧನೆಯ ತಿಂಗಳು ಎನ್ನುತ್ತಾರೆ, ಸಮುದ್ರ ಮಂಥನ ನಡೆದು ಶಿವ ವಿಷ ಸೇವಿಸಿದ್ದು ಶ್ರಾವಣ ಮಾಸದಲ್ಲಿ ಎನ್ನುವ ನಂಬಿಕೆ ಇದೆ. ಸಮುದಾಯದ
ಸಂಘಟನೆ ಮಾಡಲು ಈ ಕಾರ್ಯಕ್ರಮ ಒಂದು ಸಾಧನವಾಗಿದೆ ಎಂದು ತಿಳಿಸಿದರು.


ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಅಭೂತವಾದ ಯಶಸ್ಸು ಕಂಡಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು.ಸಂಘದ ಈ ಸಭಾಂಗಣವನ್ನು ವಿಶ್ವಕರ್ಮ ಬಂಧುಗಳು ಉತ್ತಮ ಕಾರ್ಯಗಳಿಗಾಗಿ ಉಪಯೋಗಿಸೋಣ ಎಂದ ಅವರು ವಿಶ್ವಕರ್ಮ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ವೇದಿಕೆಯೊದಗಿಸುವ ಕಾರ್ಯ ಸಂಘದಿಂದ ಆಗಲಿದೆ. ಎಂದರು.


ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶ್ವಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿದ್ಯಾ ರತ್ನಾಕರ ಆಚಾರ್ಯ,
ಕೋಶಾಧಿಕಾರಿ ವಿಶ್ವನಾಥ ಆಚಾರ್ಯ ಮಾರ್ನಬೈಲು ಉಪಸ್ಥಿತರಿದ್ದರು.
ಶ್ರೀ ಗುರು ಸೇವಾ ಪರಿಷತ್ ಅಧ್ಯಕ್ಷ ಯುವರಾಜ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಆಚಾರ್ಯ ಪ್ರಸ್ತಾವಿಸಿದರು. ಅಶೋಕ್ ಆಚಾರ್ಯ ಬಹುಮಾನಿತರ ಪಟ್ಟಿ ವಾಚಿಸಿದರು.ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ವಂದಿಸಿದರು. ಸುನೀಲ್ ಬಿ. ಹಾಗೂ ಸಂದೀಪ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಶ್ರಾವಣದಲ್ಲಿ ಒಂದು ದಿನ ಕಾರ್ಯಕ್ರಮದ ಅಂಗವಾಗಿ ಸ್ವಜಾತಿ ಬಾಂಧವರಿಗೆ ಸಂಗೀತ ಕುರ್ಚಿ, ಹೌಸಿ ಹೌಸಿ, ಮಡಕೆ ಒಡೆಯುವ ಸ್ಪರ್ಧೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ದೀಪ ನಮಸ್ಕಾರ ಪೂಜೆಯ ಮಹಾಮಂಗಳಾರತಿ ನಡೆದು ಪ್ರಸಾದ ವಿತರಿಸಲಾಯಿತು. ಬಳಿಕ ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ವಿವಿಧ ಖಾದ್ಯಗಳೊಂದಿಗೆ ಸಹಭೋಜನ ನಡೆಯಿತು.
Advertisement







