ಬಂಟ್ವಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 17ನೇ
ಅಳದಂಗಡಿ ಶಾಖೆ, ಅಳದಂಗಡಿಯ ಗುರುದೇವ ಸಂಕೀರ್ಣದಲ್ಲಿ ಭಾನುವಾರ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿ ದುರ್ಬಲ ವರ್ಗದವರಿಗೆ ಆರ್ಥಿಕವಾಗಿ ಶಕ್ತಿ ನೀಡುವ ಉದ್ದೇಶದಿಂದ ಈ ಸಹಕಾರಿ ಸಂಘ ಆರಂಭವಾಗಿದ್ದು ಈ ಸಂಘದ ಎಲ್ಲಾ ಶಾಖೆಗಳನ್ನು ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ನನ್ನ ಸುಯೋಗ ಎಂದು ತಿಳಿಸಿದರು. ಸಜೀಪಮೂಡ ಗ್ರಾಮದಲ್ಲಿ ಸಂಜೀವ ಪೂಜಾರಿ ನೇತೃತ್ವದಲ್ಲಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜ್ಞಾನ ಮಂದಿರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿ ಆರ್ಥಿಕ ಸಹಕಾರ ನೀಡಿದ್ದರು ಎಂದು ನೆನೆಪಿಸಿಕೊಂಡ ರಮಾನಾಥ ರೈ,
ಅಪನಂಬಿಕೆ ಅವಿಶ್ವಾಸದ ಈ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ಭದ್ರತಾ ಕೋಶವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮೂರ್ತೆದಾರ ಕುಲ ಕಸುಬುದಾರರಿಗೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಈ ಸಂಘದ ಮೂಲಕ ಆಗಿದೆ. ಮಹಿಳೆಯರಿಗೆ ಉದ್ಯೋಗ ಕೊಡುವ ಮೂಲಕ ಸ್ತ್ರೀ ಸಬಲೀಕರಣದ ಕಾರ್ಯವೂ ಸಾಕಾರಗೊಂಡಿದೆ ಎಂದು ತಿಳಿಸಿದರು.
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಶಾಖೆಗಳು ಉತ್ತಮ ವ್ಯವಹಾರದೊಂದಿಗೆ ಲಾಭದಲ್ಲಿ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ಸಜೀಪಮೂಡದಲ್ಲಿ ಸ್ವಂತ ಜಮೀನಿನಲ್ಲಿ ರೂ.5 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣಗೊಳ್ಳಲಿದ್ದು ಶಿರ್ತಾಡಿಯಲ್ಲಿ ನೂತನ ಶಾಖೆ ತೆರೆಯಲಾಗುವುದು ಎಂದು ತಿಳಿಸಿದರು. ಈ ವರ್ಷ ಸದಸ್ಯರಿಗೆ ಶೇ.25 ಡಿವಿಡೆಂಟ್ ನೀಡಿದ್ದು, ಶೇ.98 ಸಾಲ ವಸೂಲಾತಿಯಾಗಿದೆ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಗಣಕೀಕೃತ ವ್ಯವಸ್ಥೆ ಉದ್ಘಾಟಿಸಿ ಶುಭ ಹಾರೈಸಿದರು.
ಅತಿಥಿಗಳು ನಿರಖು ಠೇವಣಿ ಹಾಗೂ ಉಳಿತಾಯ ಖಾತೆಯನ್ನು ವಿತರಿಸಿದರು.
ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಶ್ರೀ ಕ್ಲಿನಿಕ್ನ ವೈದ್ಯ ಡಾ. ಎನ್.ಎಂ. ತುಳಪುಳೆ, ಕಟ್ಟಡ ಮಾಲಕ ಸಂಜೀವ ಪೂಜಾರಿ ಕೊಡಂಗೆ, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರ್, ಅಳದಂಗಡಿ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಭಾಷ್ ಚಂದ್ರ ರೈ, ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಕೃಷಿ ಪತ್ತಿನ ಸಹಕಾರಿ ಸಂಘ ಸುಲ್ಕೇರಿಮೊಗ್ರು ಇದರ ಅಧ್ಯಕ್ಷ ಸುಧೀರ್ ಸುವರ್ಣ, ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ಇದರ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳ್ಳಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷರ ವಿಠಲ ಬೆಳ್ಚಾಡ ಚೇಳೂರು, ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ಆಶಿಶ್ ಪೂಜಾರಿ, ಚಿದಾನಂದ ಎಂ. ಕಡೇಶ್ವಾಲ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಮಮತಾ ಜಿ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರ್ದೇಶಕರಾದ ಅರುಣ್ ಕುಮಾರ್ ಸ್ವಾಗತಿಸಿದರು, ವಾಣಿ ವಸಂತ್ ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
