ಬಂಟ್ವಾಳ: ರೈತರ ನೀರಾವರಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಅಭಿವೃದ್ದಿ ಶುಲ್ಕ ಕೈ ಬಿಡುವಂತೆ ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರು ಪ್ರಭು ರಾಜ್ಯ ಇಂಧನ ಸಚಿವರಿಗೆ ಮನವಿ ಮಾಡಿದ್ದಾರೆ.
ರೈತರು ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಸಂಬಂಧಿತ
ಬೆಳೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ನೀರಾವರಿ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಶೀಘ್ರ ವಿದ್ಯುತ್ ಸಂಪರ್ಕ ಯೋಜನೆಯಡಿಯಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಅರ್ಜಿ ಸಲ್ಲಿಸುವಾಗಲೇ ಠೇವಣಿಯೊಂದಿಗೆ ಅಭಿವೃದ್ದಿ ಶುಲ್ಕವಾಗಿ ರೂ.15 ಸಾವಿರ ಹೆಚ್ಚುವರಿಯಾಗಿ ಪಾವತಿಸಲು ಸರಕಾರದ ಇಂಧನ ಇಲಾಖಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದರಿಂದ ರಾಜ್ಯದ ಕೃಷಿಕ ಕುಟುಂಬಗಳಿಗೆ ಮತ್ತು ರೈತರಿಗೆ ತುಂಬಾ ಹೊರೆಯಾಗಿದ್ದು ,ರೈತರು ಸರಕಾರದ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ .
ಈಗಾಗಲೇ ರಾಜ್ಯಾದ್ಯಂತ ಲಕ್ಷಾಂತರ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿ ಕೆಲಸಕ್ಕೆ ಆದೇಶವಾಗಿದ್ದುಕೊಂಡು ವಿದ್ಯುತ್ ಸಂಪರ್ಕ ಪಡೆಯುವ ಈ ಸಂದರ್ಭದಲ್ಲಿ ಇಂತಹ ಆದೇಶಗಳು ರೈತರಲ್ಲಿ ದಿಗ್ಬ್ರಮೆ ಹುಟ್ಟಿಸಿದೆ ಎಂದು ಅವರು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸರಕಾರದ ಈ ಆದೇಶದಂತೆ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳ್ಳುವುದು 15.4.2025ರಿಂದ ಆದರೆ ಈ ಆದೇಶ 22.9.2023 ರ ನಂತರ ನೋಂದಣಿಯಾದ ಎಲ್ಲಾ ರೈತರಿಗೂ ಅನ್ವಯವಾಗುತ್ತದೆ. ಅಂದಿನಿಂದ ನೀರಾವರಿ ವಿದ್ಯುತ್ ಸಂಪರ್ಕ ಪಡೆದಿರುವ ರೈತರು ರೂ.15 ಸಾವಿರ ಅಭಿವೃದ್ದಿ ಶುಲ್ಕ ಭರಿಸಬೇಕಾಗುತ್ತದೆ. ಇದರಿಂದ ಸರಕಾರವು ಗ್ಯಾರಂಟಿ ಯೋಜನೆಗಳ ಸಂಭ್ರಮಾಚರಣೆಗಾಗಿ ರೈತರಿಂದಲೂ ಹಣ ವಸೂಲಿ ಮಾಡಿ ರೈತರ ಬೆನ್ನೆಲುಬನ್ನು ಮುರಿದಂತೆ ಆಗಿದ್ದು ,ರೈತರಿಗೆ ತುಂಬಾ ಕಷ್ಟವಾಗಿದೆ .ಈ ಎಲ್ಲಾ ರೈತರ ನೀರಾವರಿ ಪಂಪ್ ಸೆಟ್ಟ್ ವಿದ್ಯುತ್ ಸಂಪರ್ಕ ವಿಧಿಸಿದ ಅಭಿವೃದ್ದಿ ಶುಲ್ಕವನ್ನು ತಕ್ಷಣದಿಂದಲೇ ಕೈ ಬಿಟ್ಟು ಪರಿಷ್ಕ್ರತ ಆದೇಶ ಹೊರಡಿಸುವಂತೆ ಅವರು ಆಗ್ರಹಿಸಿದ್ದಾರೆ
Advertisement







