
ಮಂಗಳೂರು: ಇಲ್ಲಿನ ಮೇರಿಹಿಲ್ ನಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇದರ ಆಶ್ರಯದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ “ಅಗಮ್ಯ- 2025” ಹಾಸ್ಟೆಲ್ ಡೇ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಅವರು ಮಾತನಾಡಿ ಮನುಷ್ಯರು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ನಾಗರಿಕ ಸಮಾಜ ನಿರ್ಮಿಸಲು ಸಾಧ್ಯವಿದೆ. ಮಾನವೀಯತೆ ಮತ್ತು ಸಂತೃಪ್ತಿ ಎನ್ನುವ ಮೌಲ್ಯ ಮನುಷ್ಯನಲ್ಲಿ ಇದ್ದರೆ ಜೀವನ ಸಾರ್ಥಕವಾಗುತ್ತದೆ. ದುರಾಸೆ ಮನುಷ್ಯನ ಖುಷಿಯನ್ನು ನಾಶ ಮಾಡತ್ತದೆ. ಮತ್ತೊಬ್ಬರ ಸಂತೊಷದಲ್ಲಿ ನಾವು ಸಂತೋಷ ಕಂಡಾಗ ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ರಾಯಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿದ್ದಪ್ಪ ದೊಡ್ಡ ಕರಿಯಪ್ಪ ಮಾತನಾಡಿ ಶಿಕ್ಷಣದಿಂದ ಜಗತ್ತನ್ನು ಆಳಬಹುದಾಗಿದ್ದು
ಸ್ಪರ್ಧಾತ್ಮಕ ಯುಗದಲ್ಲಿ ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಂಡಿರಬೇಕು ಎಂದು ತಿಳಿಸಿದರು. ವೃತ್ತಿಪರ ಶಿಕ್ಷಣದಲ್ಲಿ ದಾರಿಗಳು ಹಲವಾರಿವೆ. ಪ್ರಯತ್ನ ಇಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ, ಎಲ್ಲವೂ ಸಾಧ್ಯ ಎನ್ನುವ ಧನಾತ್ಮಕ ಮನೋಭಾವನೆಯೊಂದಿಗೆ ನಿರ್ದಿಷ್ಠ ಗುರಿಯನ್ನು ಹೊಂದಿರಬೇಕು ಎಂದರು.
ಮಂಗಳೂರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಹಾಲಕ್ಷ್ಮಿ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಂದೆ ತಾಯಿಯನ್ನು ಗೌರವಿಸಿ, ಕುಟುಂಬ ಸದಸ್ಯರನ್ನು ಪ್ರೀತಿಸಿ ಬದ್ದತೆಯಿಂದ ವೃತ್ತಿಯನ್ನು ಮಾಡಿ ಎಲ್ಲಾ ಧರ್ಮಗಳನ್ನು ಗೌರವಿಸಿ, ತಪ್ಪುಗಳಾದಾಗ ನಿರ್ಭಿತಿಯಿಂದ ಎದುರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಸ್ಟೆಲ್ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ವಿವಿಧ ಹಾಸ್ಟೆಲ್ ಗಳ ನಿಲಯ ಮೇಲ್ವಿಚಾರಕರಾದ ಶಶಿಕಲಾ ಶೆಟ್ಟಿ, ರಾಧೇಶ್ ತೊರ್ಕೆ, ಅರುಣ್, ವೀಣಾ, ಸೌಜನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಲಯ ಮೇಲ್ವಿಚಾರಕಿ ಭವಾನಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗಳೆಂಬ ಆಭರಣ ಅನಾವರಣಗೊಂಡಾಗ ಅವರ ಜೀವನಕ್ಕೆ ಮೌಲ್ಯ ಬರುತ್ತದೆ. ಈ ನಿಲಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡಾಕೂಟ ಮತ್ತಿತರ ಚಟುವಟಿಕೆಯಲ್ಲಿ ಈ ನಿಲಯದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿನಿ ಸುಷ್ಮಾ ವಂದಿಸಿದರು, ಮಮತಾ ಹಾಗೂ ತ್ರಿಶಾಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಿತು.
Advertisement







